ಚುನಾವಣೆ: ಸರ್ಕಾರಿ ನೌಕರರಿಗೆ ಸೌಲಭ್ಯಕ್ಕೆ ಆಗ್ರಹ
ರಾಯಚೂರು: ಜಿಲ್ಲೆಯಲ್ಲಿ ಸರ್ಕಾರಿ ನೌಕರರಿಗೆ ಚುನಾವಣೆಯ ಕಾರ್ಯನಿರ್ವಹಣೆ ವೇಳೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಮರ್ಪಕ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಇತ್ತೀಚೆಗೆ ಮನವಿ ಸಲ್ಲಿಸಿ, ಚುನಾವಣೆಯ ಕಾರ್ಯದಲ್ಲಿ ಕಳೆದ ಅನೇಕ ವರ್ಷಗಳಿಂದ ಸರ್ಕಾರಿ ನೌಕರರು ನಿರಂತರವಾಗಿ ಪಾಲ್ಗೊಂಡು ಯಶಸ್ವಿಗೊಳಿಸುತ್ತಲೇ ಬಂದಿದ್ದಾರೆ. ಹೀಗೆ ಸೇವೆ ಸಲ್ಲಿಸುವ ವೇಳೆ ಮತದಾನ ಪ್ರಕ್ರಿಯೆಗೆ ತೆರಳುವ ಸಿಬ್ಬಂದಿಗೆ ಅಗತ್ಯ ಸೌಲತ್ತು ಒದಗಿಸುವಂತೆ ಒತ್ತಾಯಿಸಿದೆ. ಮತದಾನದ ದಿನ ಮತ್ತು ಮತ ಎಣಿಕೆ ಸಂದರ್ಭದಲ್ಲಿ ಸಿಬ್ಬಂದಿಗೆ ಆಹಾರ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಒದಗಿಸುವುದು. ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವುದು ಮತ್ತು ನೌಕರರಿಗೆ ಬಿಗಿಭದ್ರತೆ ಒದಗಿಸುವುದು, ಮತಗಟ್ಟೆಗೆ ತೆರಳುವ ಸಿಬ್ಬಂದಿಯು ಅಲ್ಲಿನ ಸ್ಥಳೀಯರಿಂದ ಸೌಲಭ್ಯ ನಿರೀಕ್ಷಿಸುವುದು ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ತೊಡಕಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಅಂಗವಿಕಲರನ್ನು ಮುಕ್ತಗೊಳಿಸಿ: ಅಂಗವಿಕಲರನ್ನು ಚುನಾವಣೆ ಕಾರ್ಯದಿಂದ ಮುಕ್ತಗೊಳಿಸಬೇಕು. ಆಕಸ್ಮಿಕವಾಗಿ ನೇಮಿಸಿದ್ದಲ್ಲಿ ಆದೇಶ ರದ್ದುಗೊಳಿಸುವುದು. ತಾಯಂದಿರು, ಗರ್ಭಿಣಿಯರು ಹಾಗೂ ಸಣ್ಣ ಮಕ್ಕಳಿರುವವರನ್ನು ಚುನಾವಣೆ ಕಾರ್ಯಕ್ಕೆ ನೇಮಿಸದಂತೆ ಮನವಿ ಮಾಡಿರುವ ಸಂಘವು, ಆರೋಗ್ಯ ಇಲಾಖೆ, ಪಶು ಆರೋಗ್ಯ ಸೇವೆಗಳಂಥ ತುರ್ತು ಸೇವೆಗಳಲ್ಲಿರುವ ಸಿಬ್ಬಂದಿಯನ್ನು ಚುನಾವಣೆ ಕಾರ್ಯಕ್ಕೆ ಬಳಸದಂತೆ ಮನವಿ ಮಾಡಿದೆ. ಚುನಾವಣೆ ಕರ್ತವ್ಯಕ್ಕೆ ಸಿಬ್ಬಂದಿಯನ್ನು ನೇಮಿಸುವ ವೇಳೆ ಅವರ ಸೇವಾ ಹಿರಿತನ ಪರಿಗಣಿಸಿ ಅದಕ್ಕೆ ಸೂಕ್ತ ರೀತಿಯಲ್ಲಿ ಹುದ್ದೆ ನೀಡುವಂತೆ ಸಂಘದ ಅಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ ಒತ್ತಾಯಿಸಿದ್ದಾರೆ.
ಚುನಾವಣೆ ಕಾರ್ಯಕ್ಕೆ ಗೈರು ಹಾಜರಾದರೆ ಕಠಿಣ ಕ್ರಮ
ಸಿಂಧನೂರು: ಚುನಾವಣಾ ಕಾರ್ಯಕ್ಕೆ ನೇಮಿಸಿದ ಯಾವುದೇ ಸರ್ಕಾರಿ ನೌಕರರು ಗೈರು ಹಾಜರಾದರೆ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ತಾಕೀತು ಮಾಡಿದರು. ನಗರದ ಕೂಡಲ ಸಂಗಮೇಶ್ವರ ಚಿತ್ರಮಂದಿರದಲ್ಲಿ ಚುನಾವಣಾ ಕಾರ್ಯಕ್ಕೆ ನಿಯುಕ್ತಿಗೊಳಿಸಿದ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿ, ಚುನಾವಣಾ ಆಯೋಗದ ನಿಯಮಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ನಿಭಾಯಿಸಬೇಕು. ಶೇ.100 ರಷ್ಟು ಮತದಾನ ಆಗಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ನಕಲಿ ಮತದಾನಕ್ಕೆ ಅವಕಾಶ ಮಾಡಿಕೊಡಕೂಡದು ಎಂದು ಚುನಾವಣಾ ಸಿಬ್ಬಂದಿಗೆ ಸೂಕ್ತ ಭದ್ರತೆಯನ್ನು ಸಹ ನೀಡಲಾಗುತ್ತಿದೆ. ಯಾರು ಅಧೈರ್ಯ ಪಡುವ ಅಗತ್ಯವಿಲ್ಲ ಎಂದರು. ಸರ್ಕಾರಿ ನೌಕರರು ಅಂಚೆ ಮತಪತ್ರದ ಮೂಲಕ ಕಡ್ಡಾಯವಾಗಿ ಮತ ಹಾಕಬೇಕು. ಮತದಿಂದ ವಂಚಿತವಾಗಬಾರದು ಎಂದು ಸೂಚಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ವೃಷಭೇಂದ್ರಯ್ಯ, ತಾಪಂ ಇಒ ರಮೇಶ ತಳವಾರ, ಚುನಾವಣಾ ಅಧಿಕಾರಿ ಮತ್ತಿತರರು ಪಾಲ್ಗೊಂಡಿದ್ದರು.