ಬೇಸಿಗೆ ತರಬೇತಿ ಶಿಬಿರ ಸಮಾರೋಪ
ರಾಯಚೂರು: ನಗರದಲ್ಲಿ ಇತ್ತೀಚೆಗೆ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ಮಕ್ಕಳಿಗೆ ಬೇಸಿಗೆ ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ವೆಂಕಟೇಶ್, ಬೇಸಿಗೆ ರಜೆಯ ದಿನಗಳಲ್ಲಿ ಆಯೋಜಿಸುವ ಇಂಥ ಶಿಬಿರಗಳ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಶಾರದಾ ವಿದ್ಯಾನಿಕೇತನ ಸಂಸ್ಥೆಯ ಅಧ್ಯಕ್ಷ ಮುರಳೀಧರ್, ಸ್ವಾಮಿರಾವ್ ದೇಶಪಾಂಡೆ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಶೇಷಗಿರಿರಾವ್ ಕುಲಕರ್ಣಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ವಿಪ್ರ ಸಮಾಜದ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು.
ರಿತ್ತಿ ಗೋಪಾಲಾಚಾರ್ಯ, ಸರ್ವೋತ್ತಮಾಚಾರ್ಯ ಅವರು ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ವಿವಿಧ ಧಾರ್ಮಿಕ ಆಚರಣೆಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ವೆಂಕಟೇಶ್ ನವಲಿ ಸೇರಿದಂತೆ ಪಾಲಕರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.