ಮಂತ್ರಾಲಯ: ಇಂದಿನಿಂದ 5ನೇ ಮಹಾಸಮಾರಾಧನೆ
ರಾಯಚೂರು: ಮಂತ್ರಾಲಯದಲ್ಲಿ ಪೂರ್ವ ಪೀಠಾಧಿಪತಿಗಳಾದ ಸುಶಮೀಂದ್ರ ತೀರ್ಥರ 5ನೇ ಮಹಾಸಮಾರಾಧನೆ ಕಾರ್ಯಕ್ರಮ ಏ. 24ರಿಂದ 28ರವರೆಗೆ ಆಯೋಜಿಸಲಾಗಿದೆ.
ಶ್ರೀಮಠದ ಪೀಠಾಧಿಪತಿ ಸುಯತೀಂದ್ರತೀರ್ಥರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸುಶಮೀಂದ್ರ ರಾಘವೇಂದ್ರ ಪ್ರಶಸ್ತಿಯನ್ನು ವಿದ್ವಾನ್ ರಾಜಸ್ಥಾನದ ಜೈಪುರ ವಿವಿಯ ಡಾ. ವೆಂಕಟರಮಣ ಆಚಾರ್ಯ ಮತ್ತು ಟಿಟಿಡಿ ಮಾಜಿ ಕಾರ್ಯ ನಿರ್ವಾಹಕಾಧಿಕಾರಿ ಪಿ.ವಿ.ಆರ್.ಕೆ. ಪ್ರಸಾದ್ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಸುಶಮೀಂದ್ರ ಪುರಸ್ಕಾರವನ್ನು ದ್ವೈತ ಸಿದ್ಧಾಂತ ಕ್ಷೇತ್ರದಲ್ಲಿನ ಸಾಧನೆಗೆ ಗುಂಜಳ್ಳಿ ವಾಸುದೇವಾಚಾರ್ಯ, ವಿದ್ವಾನ್ ಬಿ.ಎನ್. ಸೀತಾರಾಮಾಚಾರ್ಯ, ಡಾ. ಮಾದನೂರು ನಾರಾಯಣಾಚಾರ್ಯ ಹಾಗೂ ವಿದ್ವಾನ್ ಬಿಂದಾಚಾರ್ಯ ನಾಗಸಂಪಿಗೆ ಅವರಿಗೆ ನೀಡಲಾಗುತ್ತದೆ.
ಅದೇ ರೀತಿ ಹರಿದಾಸ ಸಾಹಿತ್ಯದಲ್ಲಿನ ಸಾಧನೆಗೆ ಖಗವರಧ್ವಜ ವಿಠ್ಠಲ ದಾಸರಿಗೆ, ಹನುಮಂತರಾವ್, ಸರಳಾಬಾಯಿ, ವಾದಿರಾಜ್ ದೇಶಪಾಂಡೆ, ಯಮುನಾಬಾಯಿ ರಾಮರಾವ್ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸಾಧನೆಗೆ ಸಚಿನ್ ದೇಸಾಯಿ, ಎಚ್.ವೆಂಕಟರಮಣ, ರಘುರಾಂ ಮತ್ತು ನಾಗಭೂಷಣ ಅವರಿಗೆ ಶ್ರೀಸುಶಮೀಂದ್ರ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ ಎಂದು ಶ್ರೀಮಠ ತಿಳಿಸಿದೆ.
ದಾಸವಾಣಿ: ಸಮಾಜ ಸೇವೆ, ಸಂಗೀತ ಸೇವೆಗಳಲ್ಲಿನ ಸಾಧಕರಿಗೂ ಈ ಪುರಸ್ಕಾರ ಪ್ರದಾನ ಮಾಡಲಾಗುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಏ. 24ರಂದು ಬೆಂಗಳೂರಿನ ಧನಲಕ್ಷ್ಮಿ ಅವರಿಂದ ದಾಸವಾಣಿ, ಏ. 25ಕ್ಕೆ ಕರ್ನೂಲಿನ ಸ್ಮಿತಾ ಬೆಳ್ಳೂರು ಅವರಿಂದ ದಾಸವಾಣಿ, ಏ.26ಕ್ಕೆ ವೀಣಾ ಹರ್ಡಿಕರ್ ಅವರಿಂದ ದಾಸವಾಣಿ, ಏ.27ಕ್ಕೆ ಬೆಂಗಳೂರಿನ ಭಾರತಿ ಪ್ರತಾಪ್ ಅವರಿಂದ ದಾಸವಾಣಿ ಮತ್ತು ಏ.28ಕ್ಕೆ ಪ್ರಸನ್ನ ಕೊರ್ತಿ ಅವರಿಂದ ದಾಸವಾಣಿ ಕಾರ್ಯಕ್ರಮ ಆಯೋಜಿಸಲಾಗಿದೆ.