ಯುವರಾಜನಿಗೆ ಕಾದಿದ್ದು 3 ಗಂಟೆ, ಭಾಷಣ ಮಾಡಿದ್ದು ಹತ್ತೇ ನಿಮಿಷ
ರಾಯಚೂರು: ಉರಿಬಿಸಿಲು, ಕುಡಿಯುವ ನೀರಿಗೆ ಪರದಾಟದ ಮಧ್ಯೆ ಕಾಂಗ್ರೆಸ್ ಯುವ ನಾಯಕನ ಮಾತು ಕೇಳಲು ಮೂರು ಗಂಟೆ ಕಾದವರಿಗೆ ರಾಹುಲ್ ಗಾಂಧಿ ನಿರಾಸೆಗೊಳಿಸಿದರು. ಕೇವಲ 10 ನಿಮಿಷ ಮಾತನಾಡಿದ ರಾಹುಲ್ ಗಾಂಧಿ ವೇದಿಕೆಯಿಂದ ಕೆಳಗಿಳಿದು ಬಾಗಲಕೋಟೆ ಜಿಲ್ಲೆಯತ್ತ ಸಾಗಿದರು.
ಸಿಂಧನೂರಿನಲ್ಲಿ ಮಂಗಳವಾರ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರ ಚುನಾವಣೆ ಪ್ರಚಾರದ ವರಸೆಯಿದು. ಬೆಳಗ್ಗೆ ಕಾರ್ಯಕ್ರಮ 10.30ಕ್ಕೆ ನಿಗದಿಯಾಗಿತ್ತು. ಹತ್ತು ನಿಮಿಷದಲ್ಲಿಯೇ ಬರಲಿದ್ದಾರೆಂದು ಕಾಂಗ್ರೆಸ್ಸಿಗರು ಘೋಷಿಸುತ್ತಲೇ ಜನರನ್ನು ಮೂರು ಗಂಟೆ ಕಾಯಿಸಿದರು.
ಒಂದೆಡೆ ಬಿಸಿಲಿನ ತಾಪ ಹೆಚ್ಚುತ್ತಿದ್ದರೆ ಮತ್ತೊಂದೆಡೆ ಕುಡಿಯುವ ನೀರಿನ ಲಭ್ಯತೆ ಸಮಸ್ಯೆಯಿಂದಾಗಿ ಜನತೆ ಪರದಾಡಿದರು. ಪಕ್ಷದವರು ನೀರಿನ ಪ್ಯಾಕೆಟ್ ಗಳನ್ನು ಒದಗಿಸಿದರೂ ಪ್ರಯೋಜನವಾಗಲಿಲ್ಲ. ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಜನರು ಸೇರಿದ್ದರಿಂದ ಸಿಂಧನೂರಿನ ಮೈದಾನ ಕಿಕ್ಕಿರಿದು ತುಂಬಿತ್ತು. ಎಲ್ಲರಿಗೂ ಸಮರ್ಪಕ ನೀರೊದಗಿಸುವುದು ಸವಾಲಾಗಿತ್ತು. 3 ಗಂಟೆಯ ಕಾಯುವಿಕೆಯ ನಂತರ ಮಧ್ಯಾಹ್ನ 1.30ರ ಸುಮಾರಿಗೆ ರಾಹುಲ್ ಅವರಿದ್ದ ಹೆಲಿಕಾಪ್ಟರ್ ಆಗಮಿಸಿತು.
ಕಾಂಗ್ರೆಸ್ ಪಕ್ಷದ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಅಭ್ಯರ್ಥಿಗಳನ್ನು ರಾಹುಲ್ ಗಾಂಧಿ ಅವರು ಭೇಟಿ ಮಾಡಿ ವೇದಿಕೆಯೇರುವ ವೇಳೆಗೆ ಮಧ್ಯಾಹ್ನದ ಎರಡು ಗಂಟೆಯಾಗಿತ್ತು. ತರಾತುರಿಯಲ್ಲಿಯೇ ಭಾಷಣ ಆರಂಭಿಸಿದ ರಾಹುಲ್ ಗಾಂಧಿ ಕೇವಲ 10 ನಿಮಿಷದಲ್ಲಿಯೇ ಮಾತು ಮುಗಿಸಿ ಹೆಲಿಕಾಪ್ಟರ್ ನತ್ತ ಹೆಜ್ಜೆ ಹಾಕುವ ಮೂಲಕ ಮೂರು ಗಂಟೆ ಕಾದಿದ್ದ ಜನರನ್ನು ನಿರಾಶಗೊಳಿಸಿದರು.
ರಾಹುಲ್ ಕ್ಷಮೆಯಾಚನೆ: ಬಿರು ಬಿಸಿಲಲ್ಲಿ ಕಾರ್ಯಕರ್ತರು ಮತ್ತು ಜನತೆಯನ್ನು ಕಾಯಿಸಿದ್ದು ತಪ್ಪಾಗಿದೆ ನನ್ನನ್ನು ಕ್ಷಮಿಸಿ. - ಹೀಗೆಂದು ಕ್ಷಮೆಯಾಚಿಸಿದ್ದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ. ಕಳೆದ 3 ತಾಸು ಬಿರುಬಿಸಿಲ ಮಧ್ಯೆಯೂ ತಮಗಾಗಿ ಕಾದಿದ್ದಕ್ಕೆ ಅಭಿನಂದಿಸಿ, ತಡವಾಗಿದ್ದಕ್ಕೆ ಕ್ಷಮೆ ಕೋರಿದರು.