371ನೇ ಕಲಂ: 30 ವರ್ಷದ ಪಶ್ಚಾತ್ತಾಪ ಬಳಿಕ ಸಮ್ಮತಿ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.24
ರಾಜ್ಯದ ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನದ 371ನೇ ಕಲಂ(ಜೆ) ಅಡಿ ವಿಶೇಷ ಸ್ಥಾನಮಾನ ನೀಡಿಕೆ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನವೇನೂ ಇಲ್ಲ. ಬದಲಿಗೆ ಕಳೆದ 30ವರ್ಷಗಳಿಂದ ಅಧಿಕಾರದಲ್ಲಿದ್ದರೂ ಜಾರಿಗೆ ತರಲು ಸಾಧ್ಯವಾಗದ ಪಶ್ಚಾತ್ತಾಪದಿಂದ ಸದ್ಯ ಈ ತಿದ್ದುಪಡಿ ಜಾರಿಗೆ ತರಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥ ಮಲ್ಕಾಪುರೆ ಲೇವಡಿ ಮಾಡಿದರು.
ಅವರು ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈ.ಕ. ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ಇದುವರೆಗೆ ಸಾಧ್ಯವಾಗಲಿಲ್ಲ ಎಂಬ ವಿಚಾರವನ್ನು ಆ ಪಕ್ಷ ಮನವರಿಕೆ ಮಾಡಿಕೊಳ್ಳಬೇಕಿದೆ. ಪಶ್ಚಾತ್ತಾಪದ ಫಲವಾಗಿ ಸದ್ಯ ಜಾರಿಗೆ ತಂದಿದೆ ಎಂದು ಆರೋಪಿಸಿದರು.
ಸತ್ಯಾಸತ್ಯತೆ ಏನು?: ರಾಜ್ಯದ ಕೇಂದ್ರ ಸರ್ಕಾರದಲ್ಲಿರುವ ನಾಯಕರು ಹಾಗೂ ಕಾಂಗ್ರೆಸ್ ಮುಖಂಡರು ಹೈ.ಕ. ಭಾಗದಲ್ಲಿ ಓಟು ಪಡೆಯಲು 371ನೇ ಕಲಂ ತಿದ್ದುಪಡಿಯ ವಿಚಾರವನ್ನು ಪ್ರಚಾರಕ್ಕೆ ಬಳಸುತ್ತಿದ್ದಾರೆ. ವಿಶೇಷ ಸ್ಥಾನಮಾನ ನೀಡಿಕೆಯನ್ನು ತಾವೇ ಜಾರಿಗೆ ತಂದಿದ್ದಾಗಿ ಹೇಳಿಕೊಳ್ಳುತ್ತಿದೆ. ಈ ಹಿಂದೆ ಸಾಧ್ಯವಾಗದ್ದು, ಈಗ ಜಾರಿಗೆ ತಂದಿರುವ ಹಿಂದಿನ ಸತ್ಯಾಸತ್ಯತೆ ಬಯಲು ಮಾಡುವಂತೆ ಸವಾಲು ಹಾಕಿದರು.
ಹೈ.ಕ ವಿಶೇಷ ಸ್ಥಾನಮಾನ ನೀಡಿಕೆಯಲ್ಲಿ ರಾಜ್ಯದ ಬಿಜೆಪಿ ಸರ್ಕಾರದ ಪಾಲೂ ಇದೆ ಎಂಬುದನ್ನು ಮರೆಯುವಂತಿಲ್ಲ. ಕೇಂದ್ರ ಸರ್ಕಾರವೊಂದೇ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಚಾರ ಪಡೆಯಲು ಮುಂದಾಗಿದೆ ಎಂದು ಆರೋಪಿಸಿದರು.
ಆತ್ಮಾವಲೋಕನ: ಈಚೆಗೆ ಸಿಂಧನೂರಿನಲ್ಲಿ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಪ್ರಚಾರ ಸಭೆಯಲ್ಲಿ ಬಿಜೆಪಿ ಕುರಿತು ಕೀಳುಮಟ್ಟದ ಹೇಳಿಕೆ ನೀಡಿರುವುದು ಅವರಿಗೆ ತಕ್ಕುದಲ್ಲ. ರಾಜ್ಯದ ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಆರೋಪ ಹೊರಿಸುವ ಮೊದಲು ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ನಡೆಸಿರುವ ವಿವಿಧ ಮೊದಲ ಅಕ್ರಮಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿರುಗೇಟು ನೀಡಿದರು.
ಯುದ್ಧ ವಿಮಾನ ಖರೀದಿ, 2ಜಿ ತರಂಗಾಂತರ ಹಂಚಿಕೆ, ಕಲ್ಲಿದ್ದಲು ಅಕ್ರಮ ಸೇರಿದಂತೆ ಲಕ್ಷಾಂತರ ಕೋಟಿ ರು. ಅಕ್ರಮದಲ್ಲಿ ಕೇಂದ್ರದ ಕಾಂಗ್ರೆಸ್ ನಾಯಕರು ಶಾಮೀಲಾಗಿರುವುದನ್ನು ರಾಹುಲ್ ಗಾಂಧಿ ಮರೆಮಾಚುವುದು ಸರಿಯಲ್ಲ. ಕೇಂದ್ರದ ಕಾಂಗ್ರೆಸ್ ನ ನಾಯಕರು ಅಕ್ರಮ ಎಸಗಿರುವವರ ರಕ್ಷಣೆಗೆ ನಿಂತಿದೆ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರಕ್ಕೆ: ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿ ಕೊಡುವ ಮೂಲಕ ಮತ ಯಾಚಿಸಲಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಪಕ್ಷದ ಪರ ಅಲೆಯಿದೆ. ಮತ್ತೆ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಯಚೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಮಾತನಾಡಿ, ಕಳೆದ ನಾಲ್ಕೈದು ದಿನಗಳಿಂದ ನಗರದ ವಿವಿಧೆಡೆ ಪ್ರಚಾರ ನಡೆಸಿದ ವೇಳೆ ನಾಗರಿಕರು ನಾನಾ ರೀತಿಯ ಸಮಸ್ಯೆಗಳನ್ನು ಹೊರಹಾಕಿದ್ದು, ಹಾಲಿ ಕಾಂಗ್ರೆಸ್ ಶಾಸಕ ಸೈಯದ್ ಯಾಸೀನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಹೇಳಿದರು.
ನಗರದಲ್ಲಿ ಜೆಡಿಎಸ್ ಒಡೆದ ಮನೆಯಾಗಿದೆ. ಹೀಗಾಗಿ ಬಿಜೆಪಿ ಪರ ಮತದಾರರು ಚುನಾವಣೆಯಲ್ಲಿ ಒಲವು ತೋರಿದ್ದಾರೆಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಆರ್. ತಿಮ್ಮಯ್ಯ, ಆಶೋಕ ಗಸ್ತಿ, ಬಂಡೇಶ್ ವಲ್ಕಂದಿನ್ನಿ, ನರಸಪ್ಪ ಯಕ್ಲಾಸಪುರ, ರಾಮಾಂಜನೇಯಲು ಸೇರಿ ಕಾರ್ಯಕರ್ತರು ಹಾಜರಿದ್ದರು.
ಬಿಜೆಪಿಗೆ ಜಗನ್ನಾಥ ಸುಂಕಾರಿ ಗುಡ್ ಬೈ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.24
ಪ್ರಸಕ್ತ ಚುನಾವಣೆಯಲ್ಲಿ ಛಲವಾದಿ ಜನಾಂಗದವರಿಗೆ ಸ್ಪರ್ಧೆಗೆ ಅವಕಾಶ ನೀಡದ ಬಿಜೆಪಿ ವರಿಷ್ಠರ ವರ್ತನೆ ಖಂಡಿಸಿ ಬಿಜೆಪಿ ತೊರೆಯುತ್ತಿರುವುದಾಗಿ ಮುಖಂಡ ಜಗನ್ನಾಥ ಸುಂಕಾರಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಛಲವಾದಿ ಮತ್ತು ದಲಿತರಿಗೆ ಟಿಕೆಟ್ ನೀಡಿಕೆಯಲ್ಲಿ ಅನ್ಯಾಯ ಮಾಡಲಾಗಿದೆ. ಅದರಲ್ಲೂ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಈ ಜನಾಂಗದ ಒಬ್ಬರಿಗೂ ಸ್ಪರ್ಧೆಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.
ಕಡೆಗಣನೆ: ಬಿಜೆಪಿ ಕೆಳವರ್ಗದವರಿಗೆ ಅನ್ಯಾಯ ಮಾಡಿದೆ. ಆ ಮೂಲಕ ಸಾಮಾಜಿಕ ನ್ಯಾಯದ ವಿರುದ್ಧ ಬಿಜೆಪಿ ವರ್ತಿಸುತ್ತಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷ ತೊರೆಯಲು ನಿರ್ಧರಿಸಿದ್ದಾಗಿ ತಿಳಿಸಿದ ಅವರು, ಬಿಜೆಪಿ ಪಕ್ಷದಲ್ಲಿ ಕಳೆದ ಅನೇಕ ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದ ತಮಗೆ ಸ್ಪರ್ಧೆಗೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.
ಕಳೆದ ಅನೇಕ ವರ್ಷಗಳಿಂದ ಲಿಂಗಸ್ಗೂರು ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದ ತಮ್ಮನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ. ಪಕ್ಷದಲ್ಲಿ ಮೂಲ ಕಾರ್ಯಕರ್ತರಿಗೆ ವರಿಷ್ಠರು ಬೆಲೆ ನೀಡುತ್ತಿಲ್ಲ. ಲಿಂಗಸ್ಗೂರು ಕ್ಷೇತ್ರದಲ್ಲಿ ಹಣ ನೀಡಿದವರಿಗೆ ಟಿಕೆಟ್ ನೀಡಲಾಗಿದೆ. ಇತ್ತೀಚೆಗೆ ಪಕ್ಷ ಸೇರಿದವರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಇದುವರೆಗೆ ಪಕ್ಷ ಕಟ್ಟಿ ಬೆಳೆಸಿದವರನ್ನು ಕಡೆಗಣಿಸಲಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸೇರ್ಪಡೆ: ಪಕ್ಷದಲ್ಲಿ ತಮಗಾದ ಅನ್ಯಾಯದಿಂದ ಬೇಸತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವುದಾಗಿ ತಿಳಿಸಿದ ಅವರು, ಲಿಂಗಸ್ಗೂರು ಕ್ಷೇತ್ರದ ಟಿಕೆಟ್ ಮಾರಾಟ ಮಾಡಲಾಗಿದೆ. ತಮಗೆ ಟಿಕೆಟ್ ನಿರಾಕರಿಸುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಹಣ ಪಡೆದು ಬೇರೊಬ್ಬರಿಗೆ ಟಿಕೆಟ್ ಮಾರಾಟ ಮಾಡಿರುವುದು ಸ್ಪಷ್ಟವಾಗಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ಅವರು ತಮಗೆ ಟಿಕೆಟ್ ದೊರೆಯದಂತೆ ಮಾಡುವಲ್ಲಿ ಡೀಲ್ ನಡೆಸಿದ್ದಾರೆ. ಈಚೆಗಷ್ಟೇ ಪಕ್ಷ ಸೇರಿದ್ದ ಟಿ.ಆರ್. ನಾಯಕ ಅವರಿಂದ ಲಕ್ಷಾಂತರ ಹಣ ಪಡೆದು ಟಿಕೆಟ್ ನೀಡಲಾಗಿದೆ ಎಂದು ಅವರು ಆರೋಪಿಸಿದರು.
ಹಣ ಪಡೆದು ಬೇರೆಯವರಿಗೆ ಟಿಕೆಟ್: ಬಿಜೆಪಿಯಲ್ಲಿನ ಆಂತರಿಕ ಕಲಹಗಳಿಂದಾಗಿ ಟಿಕೆಟ್ ಹಂಚಿಕೆಯಲ್ಲಿ ಪ್ರಾಮಾಣಿಕತೆ ಮೆರೆದಿಲ್ಲ. ವಲಸೆ ಬಂದವರಿಗೆ ಹಾಗೂ ಹಣಕ್ಕಾಗಿ ಬೇರೆಯವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ವಿತರಿಸಲಾಗಿದೆ. ಹಣ ಮತ್ತು ಕೆಲ ವ್ಯಕ್ತಿಗಳ ಪ್ರತಿಷ್ಠೆಗೆ ತಕ್ಕಂತೆ ನಿರ್ಧಾರಗಳು ಜಾರಿಗೆ ಬರುತ್ತಿವೆ ಎಂದು ಆರೋಪಿಸಿದರು.
ಛಲವಾದಿ, ಮಾದಿಗ ಸಮಾಜದವರಿಗೆ ಸ್ಪರ್ಧೆಗೆ ಅವಕಾಶ ನೀಡದ ಬಿಜೆಪಿ ಪಕ್ಷದವರಿಗೆ ಪ್ರಸಕ್ತ ಚುನಾವಣೆಯಲ್ಲಿ ಪಾಠ ಕಲಿಸಲು ತಾವು ಕಾಂಗ್ರೆಸ್ ಸೇರುತ್ತಿರುವುದಾಗಿ ತಿಳಿಸಿದ ಅವರು, ಸುಮಾರು 500ಕ್ಕೂ ಹೆಚ್ಚಿನ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಾರಾಯಣ, ತಿಮ್ಮಪ್ಪ, ಆಂಜನೇಯಲು, ಬಸವರಾಜ ಮತ್ತಿತರರಿದ್ದರು.