ಅಡ್ಡಾದಿಡ್ಡಿ ಚಾಲನೆ; 2 ಸಾವು
ಯಾದಗಿರಿ: ಅಡ್ಡಾದಿಡ್ಡಿ ಕಾರು ಚಾಲನೆಯಿಂದ ಪಾದಚಾರಿ ಹಾಗೂ ಬೈಕ್ ಸವಾರ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ನಗರದ ಹೊಸಳ್ಳಿ ಕ್ರಾಸ್ ಬಳಿ ಬುಧವಾರ ಸಂಭವಿಸಿದೆ. ಬಿಳ್ಹಾರದ ಮಲ್ಲಿಕಾರ್ಜುನ(38) ಹಾಗೂ ರಾಜಸ್ಥಾನ ಮೂಲದ ರಾಕೇಶ(30) ಮೃತಪಟ್ಟ ದುರ್ದೈವಿಗಳು. ಗ್ಯಾರೇಜ್‌ನಿಂದ ಹೊರಬಿದ್ದ ಕಾರು ಹಿಮ್ಮುಖವಾಗಿ ಚಲಿಸಿ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಜಿತ್ತು ಮತ್ತು ರಾಕೇಶ ಎಂಬವರಿಗೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು, ಚಲಿಸುತ್ತಿದ್ದ ಬೈಕ್‌ಗೆ ಬಡಿದಿದೆ. ಇದರಿಂದ ಬೈಕ್‌ನಲ್ಲಿದ್ದ ಬಿಳ್ಹಾರದ ಮಲ್ಲಿಕಾರ್ಜುನ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತೀವ್ರ ಗಾಯಗೊಂಡಿದ್ದ ರಾಕೇಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಅಪಘಾತ ನಡೆಸಿದ ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಡಿಎಸ್ಪಿ ಎಸ್.ಬಿ. ಕಟ್ಟಿಮನಿ, ಸಿಪಿಐ ಶಂಕರಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ಬಾಲಕ ಸಾವು
ಯಾದಗಿರಿ: ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟ ಘಟನೆ ಶಹಾಪುರ ತಾಲೂಕಿನ ಚಂದಾಪುರ ತಾಂಡಾದಲ್ಲಿ ಬುಧವಾರ ಜರುಗಿದೆ. ಹನುಮಂತರಾಯ ತಂದೆ ಮಲ್ಲಪ್ಪ(12) ಮೃತ ಬಾಲಕ. ಹೊಲದಿಂದ ಮನೆಗೆ ಬರುತ್ತಿದ್ದಾಗ ಸಿಡಿಲು ಬಡಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.