ಅಪಘಾತ: 3 ಗಾಯಾಳು ಸಾವು
ರಾಯಚೂರು: ಮಾನವಿ ತಾಲೂಕಿನ ಸೀಕಲ್ ಕ್ರಾಸ್ ಬಳಿ ಮಂಗಳವಾರ ರಾತ್ರಿ ಲಾರಿಗೆ ಟಾಟಾ ಏಸ್ ಡಿಕ್ಕಿ ಹೊಡೆದು ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಮೂವರು ಬುಧವಾರ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ. ಈ ದುರಂತದಲ್ಲಿ ಒಟ್ಟು 6 ಜನ ಮೃತಪಟ್ಟಿದ್ದಾರೆ.
ಮೃತರನ್ನು ಲಿಂಗಮ್ಮ, ಭೀಮೇಶ್ ಮತ್ತು ಟಾಟಾ ಏಸ್ ಚಾಲಕ ಬಾಷಾ ಎಂದು ಗುರುತಿಸಲಾಗಿದೆ. ಮಾನವಿಯತ್ತ ಟಾಟಾ ಏಸ್ನಲ್ಲಿ ಇವರು ಗರ್ಭೀಣಿಯನ್ನು ಚಿಕಿತ್ಸೆಗೆ ಕರೆದೊಯ್ಯುತ್ತಿದ್ದ ವೇಳೆ ರಸ್ತೆ ಬದಿಗೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ವೀರೇಶ್, ಈರಮ್ಮ ಮತ್ತು ಶಂಕ್ರಮ್ಮ ಎಂಬುವವರು ಮಂಗಳವಾರ ರಾತ್ರಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು.
ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಬಾಷಾ ಮಾನವಿ ಆಸ್ಪತ್ರೆಯಲ್ಲಿ ಅಸುನೀಗಿದರೆ, ಭೀಮೇಶ್, ಲಿಂಗಮ್ಮ ರಾಯಚೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.