ಬಿರುಗಾಳಿಗೆ ಹಾರಿದ ಶೀಟುಗಳು
ದೇವದುರ್ಗ: ಪಟ್ಟಣದಲ್ಲಿ ಬುಧವಾರ ರಾತ್ರಿ ಬಿರುಗಾಳಿ ಸಹಿತ ಗುಡುಗು ಮಿಶ್ರಿತ ಮಳೆ ಸುರಿದಿದ್ದು, ಬಿರುಗಾಳಿಗೆ ಬಸ್ನಿಲ್ದಾಣದ ಬಳಿಯ ಹೊಟೇಲ್ಗಳಿಗೆ ಹೊದಿಸಿದ್ದ ತಗಡಿನ ಶೀಟುಗಳು ಹಾರಿಹೋಗಿವೆ.
ಪಟ್ಟಣದಲ್ಲಿ ಸಂಜೆಯಾಗುತ್ತಿದ್ದಂತೆಯೇ ಮೋಡ ಕವಿದ ವಾತಾವರಣ ಕಂಡುಬಂದು ರಾತ್ರಿ 7ರ ನಂತರದಲ್ಲಿ ಬಿರುಗಾಳಿ ಬೀಸಲಾರಂಭಿಸಿ ಬಸ್ ನಿಲ್ದಾಣದ ಬಳಿಯ ಹೊಟೇಲ್ಗಳಿಗೆ ಹೊದಿಸಿದ ತಗಡಿನ ಶೀಟುಗಳು ಬಿರುಗಾಳಿಗೆ ಸಿಲುಕಿ ಹಾರಿ ಹೋಗಿದ್ದು, ಯಾರಿಗೂ ಹಾನಿಯಾಗಿಲ್ಲ.
ಈ ವೇಳೆ ಬಿರುಗಾಳಿ ಸಹಿತ ಗುಡುಗು ಮಿಶ್ರಿತ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದು, ನಗರದ ಜನಜೀವನ ಅಸ್ತವ್ಯಸ್ತಗೊಂಡಿತು. ಬಿರುಗಾಳಿಗೆ ವಿದ್ಯುತ್ ಕೈಕೊಟ್ಟಿದ್ದರಿಂದ ಜನತೆ ಪರದಾಡಿದರು. ಪಟ್ಟಣದಲ್ಲಿ ಸುರಿದ ಮಳೆ ಕಳೆದ ಕೆಲ ದಿನಗಳಿಂದ ಹೆಚ್ಚಿದ್ದ ಬಿರುಬಿಸಿಲ ತಾಪ ಮಾಯವಾಗಿಸಿ ವಾತಾವರಣದಲ್ಲಿ ತಂಪು ತಂದಿತು.