ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮತದಾನಕ್ಕೆ ಬಿಸಿ ಎಫೆಕ್ಟ್ ಭೀತಿ

Lingaraj Badiger
Updated On : 25 Apr 2013, 10:55 am

ಕನ್ನಡಪ್ರಭ ವಾರ್ತೆ, ರಾಯಚೂರು, ಏ.24
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಅಲೆದಾಟ ತೀರಾ ಸಾಮಾನ್ಯ ಸಂಗತಿ. ಅದರಲ್ಲೂ ಬೇಸಿಗೆಯ ಈ ದಿನಗಳಲ್ಲಿ ನೀರಿಗೆ ಕಿಲೋ ಮೀಟರ್‌ಗಟ್ಟಲೇ ಸಾಗುವುದು ಜನತೆಗೆ ಅನಿವಾರ್ಯ.
ಈಗ ಚುನಾವಣೆಯ ಕಾಲ ಜತೆಗೆ ಬೇಸಿಗೆಯೂ ಬಂದಿದೆ. ಚುನಾವಣೆ ಪ್ರಚಾರಕ್ಕೆ ಬರುವ ನಾಯಕರ ಸಂತೃಪ್ತಿ ಪಡೆಸಲು ಕಾರ್ಯಕರ್ತರನ್ನು ಕರೆ ತರುವವರಿಗೆ ಕುಡಿಯುವ ನೀರೊದಗಿಸುವುದು ಬಹುದೊಡ್ಡ ಸವಾಲಾಗಿದೆ. ನಾಯಕರಿಗೂ ಬಿರುಬಿಸಿಲಿನಲ್ಲಿ ಪ್ರಚಾರ ಕೈಗೊಳ್ಳುವುದು ಸಂಕಷ್ಟ ತಂದಿದೆ.
ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ರಾಜಕೀಯ ಕಣ ರಂಗೇರಿದೆ. ಪ್ರಚಾರದ ಅಬ್ಬರ ಎಲ್ಲೆಡೆ ಕಂಡುಬಂದಿದೆ. ಅದರಲ್ಲೂ ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಬಿಸಿಲೆಂದರೇ ಕೇಳಬೇಕೇ. ಚುನಾವಣೆಯ ತಿಂಗಳು ಏಪ್ರಿಲ್ ಆರಂಭದೊಂದಿಗೆ ತಾಪಮಾನ ಬರೋಬ್ಬರಿ 40ರ ಗಡಿ ದಾಟಿ ಚುರುಕು ಮುಟ್ಟಿಸಿದೆ. ಪರಿಣಾಮ ಕುಡಿಯುವ ನೀರಿಗೆ ಆತಂಕ ತಂದಿದೆ.
ಜನರನ್ನು ಸೇರಿಸೋದೇ ಪ್ರಯಾಣ: ಚುನಾವಣೆಯ ಪ್ರಚಾರ ಕಾರ್ಯ ಭರದಿಂದ ಸಾಗಿರುವುದು ಅನೇಕರಿಗೆ ಸದ್ಯ ಹೊಟ್ಟೆ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಅನುಕೂಲ ಕಲ್ಪಿಸಿದೆ. ಆದರೆ ಹಿರಿಯ ನಾಯಕರು ಚುನಾವಣೆ ಪ್ರಚಾರಕ್ಕೆ ಬರುತ್ತಾರೆಂದರೆ ನಾಯಕರಲ್ಲಿ ನಡುಕವೇ ಆರಂಭವಾಗುತ್ತದೆ. ಪ್ರಚಾರ ಸಭೆಗಳಿಗೆ ಜನರನ್ನು ಸೇರಿಸುವುದು ಪ್ರಯಾಸದ ಕಾರ್ಯ. ಅದಕ್ಕೆ ಬಿರುಬಿಸಿಲ ಬೇಸಿಗೆಯೇ ಕಾರಣ ಎಂಬುದು ಸುಳ್ಳಲ್ಲ.
ಸಿಂಧನೂರಿನಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಅವರ ಚುನಾವಣೆ ಪ್ರಚಾರ ಸಭೆಯಲ್ಲಿಯೂ ಹೀಗೆಯೇ ಆಯಿತು. ಸಭೆಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮತ್ತು ಜನತೆ ಪಾಲ್ಗೊಂಡಿದ್ದರು. ಪಕ್ಷವು ಹೀಗೆ ಬಂದಿದ್ದ ಎಲ್ಲರಿಗೂ ಕುಡಿಯುವ ನೀರಿನ ಟ್ಯಾಂಕರ್, ನೀರಿನ ಪ್ಯಾಕೇಟ್‌ಗಳನ್ನು ಒದಗಿಸುವ ಕಾರ್ಯ ಮಾಡಿತ್ತು.
ಕಾರ್ಯಕ್ರಮ ವಿಳಂಬ: ರಾಹುಲ್ ಗಾಂಧಿ ಅವರ ಆಗಮನ ವಿಳಂಬ ಮತ್ತು ಬಿಸಿಲಿನ ತಾಪ ಏರಿಕೆಯಿಂದಾಗಿ ಕುಡಿಯುವ ನೀರಿಗೆ ಭಾರಿ ಬೇಡಿಕೆಯುಂಟಾಯಿತು. ನೀರಿನ ಪ್ಯಾಕೇಟ್‌ಗಳು ಖಾಲಿಯಾದರೆ ನೀರಿನ ಟ್ಯಾಂಕರ್‌ಗಳಲ್ಲಿನ ನೀರು ಯಾರಿಗೂ ಸಾಲದಾಯಿತು. ಕೊನೆಗೆ ಕಾರ್ಯಕರ್ತರು ಸಮೀಪದ ಅಂಗಡಿಗಳಿಗೆ ಮುಗಿಬಿದ್ದು ನೀರಿನ ಪ್ಯಾಕೇಟ್ ಖರೀದಿಸಿದ್ದಾಯಿತು. ಸುಮಾರು ಮೂರು ಗಂಟೆಗಳ ನಂತರ ರಾಹುಲ್ ಗಾಂಧಿ ಆಗಮಿಸಿ ಭಾಷಣ ಮಾಡಿ ಮರಳಿದಾಗ ಸೇರಿದ್ದವರಿಗೆ ನಿರಾಳತೆಯ ಅನುಭವ.
ಆದರೆ ಸಮಾರಂಭದಲ್ಲಿದ್ದ ಮೂರು ಗಂಟೆಯಲ್ಲಿ ಕುಡಿಯುವ ನೀರಿನ ಪ್ಯಾಕೇಟ್ ಹೊತ್ತು ತರುವವರ ಕೈಯಿಂದಲೇ ಪ್ಯಾಕೇಟ್ ಕಿತ್ತುಕೊಳ್ಳಲು ಭಾರಿ ಪೈಪೋಟಿ ಕಂಡುಬಂದಿತು. ಕೆಲವರಿಗೆ ನೀರು ದೊರೆತ ಸಂತಸವಾದರೆ ಮತ್ತೂ ಕೆಲವರಿಗೆ ನೀರು... ನೀರು... ಎನ್ನುವಂತಾಯಿತು. ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಎಲ್ಲ ನಾಯಕರು ಜನತೆಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಜಗಳ ಬೇಡ ಎಂದು ಸಲಹೆ ನೀಡುತ್ತಲೇ ಕಾಲಕಳೆಯುವಂತಾಯಿತು. ಇದು ಕುಡಿಯುವ ನೀರಿನ ಅವಶ್ಯಕತೆಯನ್ನು ಸ್ಪಷ್ಟವಾಗಿಸಿತು.
ತಾಪ ಹೆಚ್ಚಳ-ಆತಂಕ: ಜಿಲ್ಲೆಯಲ್ಲಿ ಬೇಸಿಗೆಯ ಮಧ್ಯದ ಕಾಲ ಎಂದರೆ ಅದು ಏಪ್ರಿಲ್ ತಿಂಗಳು. ಇದೇ ಏಪ್ರಿಲ್‌ನಲ್ಲಿ ಚುನಾವಣೆಯ ಪ್ರಚಾರ ನಡೆಯುತ್ತಿರುವುದು ರಾಜಕೀಯ ಪಕ್ಷಗಳ ನಾಯಕರಿಗೆ ಬೆವರಿಳಿಸುತ್ತಿದೆ. ಒಂದೆಡೆ ಪ್ರಚಾರದ ಕಾವು ಏರತೊಡಗಿದ್ದರೆ ಮತ್ತೊಂದೆಡೆ ಬಿಸಿಲಿನ ಕಾರಣಕ್ಕೆ ಎಲ್ಲಿ ಮತದಾನದ ದಿನ ಮತದಾನದ ಪ್ರಮಾಣ ಕುಸಿತ ಕಂಡು ತಮಗೆ ಸೋಲಾದರೆ ಎಂಬ ಸೋಲು- ಗೆಲವಿನ ಲೆಕ್ಕಾಚಾರದಲ್ಲಿಯೇ ಆತಂಕದಲ್ಲಿದ್ದಾರೆ.
ಈ ಕುರಿತು 'ಕನ್ನಡಪ್ರಭ' ಜತೆ ಮಾತನಾಡಿದ ಗುಲ್ಬರ್ಗದ ಬಿಜೆಪಿ ಮುಖಂಡ ಅಮರನಾಥ ಪಾಟೀಲ್, ಬಿಸಿಲಿನ ತಾಪದಲ್ಲಿನ ಏರಿಕೆಯಿಂದ ಮತದಾನದ ದಿನವಾದ ಮೇ 5ರಂದು ಮತದಾನ ಮಾಡಲು ಮತದಾರರು ಮತಗಟ್ಟೆಗಳಿಗೆ ತೆರಳಲು ನಿರಾಸಕ್ತಿ ತೋರುವ ಆತಂಕವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸದ್ಯ ಜಿಲ್ಲಾಡಳಿತ ಶೇ.100ರಷ್ಟು ಮತದಾನಕ್ಕಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿದೆ. ಪ್ರತಿಯೊಬ್ಬ ಮತದಾರರನ್ನು ಬಿರುಬಿಸಿಲ ಈ ದಿನಗಳಲ್ಲಿ ಮತಗಟ್ಟೆಯತ್ತ ಸೆಳೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರಯಾಸ ಪಡಬೇಕಾಗಬಹುದು. ಒಂದೆಡೆ ಕುಡಿಯುವ ನೀರಿನ ಸಮಸ್ಯೆ ಮತ್ತೊಂದೆಡೆ ಬಿರುಬಿಸಿಲ ತಾಪಕ್ಕೆ ಮತದಾನ ಪ್ರಮಾಣದ ಕುಸಿತದ ಭೀತಿ ರಾಜಕೀಯ ನಾಯಕರಲ್ಲಿ ಕಾಡುತ್ತಿದೆ.
-ಜಗನ್ನಾಥ ಆರ್. ದೇಸಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement