ಸುಕಾಪೇಟೆಯಲ್ಲಿ ಸಿದ್ದು ಚುರುಕಿನ ಪ್ರಚಾರ
ಕ.ಪ್ರ. ವಾರ್ತೆ, ಸಿಂಧನೂರು, ಏ.24
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಗರದ ಸುಕಾಲಪೇಟೆಯಲ್ಲಿ ಚುರುಕಿನ ಪ್ರಚಾರ ನಡೆಸಿ ಕಾಂಗ್ರೆಸ್ಗೆ ಮತ ಹಾಕುವಂತೆ ಮನವಿ ಮಾಡಿದರು.
ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಸಿಂಧನೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಬಂದಿದ್ದ ಸಿದ್ದರಾಮಯ್ಯ ಸುಕಾಲಪೇಟೆಯ ಕಾಂಗ್ರೆಸ್ ಮುಖಂಡ ಭಂಗಿ ವೆಂಕೋಬಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಇದಕ್ಕೂ ಮುನ್ನ ನಂಜುಂಡಯ್ಯ ಗುರುವಿನ ಮಠಕ್ಕೆ ತೆರಳಿ ಹನುಮಂತಯ್ಯ ಮತ್ತು ನಂಜುಂಡಯ್ಯ ಗುರುಗಳಿಂದ ಆಶೀರ್ವಾದ ಪಡೆದರು.
ಕಳೆದ 30 ವರ್ಷಗಳಿಂದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರ ಮನೆಗೆ ಬರುತ್ತಿದ್ದ ಸಿದ್ದರಾಮಯ್ಯ ಭಂಗಿ ವೆಂಕೋಬಣ್ಣ ಅವರ ಮನೆಗೆ ಭೇಟಿ ನೀಡಿದ ಸಂಗತಿ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅವರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಂ.ಕಾಳಿಂಗಪ್ಪ, ಹನುಮೇಶ ಕಟಾಲಿ, ಎನ್.ಅಮರೇಶ, ರಾಜುಗೌಡ ಬಾದರ್ಲಿ, ಹನುಮೇಶ, ತಿಮ್ಮಣ್ಣ ವಾಲೇಕಾರ, ಶಶಿಧರ ಭಂಗಿ ಮತ್ತಿತರರು ಇದ್ದರು.
ಹಂಪನಗೌಡರ ವಿರುದ್ಧ 3 ಪ್ರಕರಣ ದಾಖಲು
ಸಿಂಧನೂರು: ಮಾಜಿ ಶಾಸಕ ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ ಅವರ ವಿರುದ್ಧ ಮೂರು ಪ್ರಕರಣಗಳು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿಯವರಿಗೆ ಹಂಪನಗೌಡ ಬಾದರ್ಲಿ ಬೆಳ್ಳಿ ಕಿರೀಟ ಹಾಗೂ ಗದೆಯನ್ನು ನೀಡಿದ್ದು, ಎರಡು ವಾಹನಗಳನ್ನು ಅನುಮತಿ ಇಲ್ಲದೆ ಬಳಸಿದ್ದು ಮತ್ತು ಅನುಮತಿ ಇಲ್ಲದೆ ನಗರದ ಸುತ್ತಮುತ್ತ ಬಂಟಿಂಗ್ಸ್ ಹಾಕಿದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈ ಕುರಿತು ಪಿಎಸ್ಐ ಎನ್.ಆರ್. ಲಿಂಗಪ್ಪ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
---