ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆರ್ಟಿಒಗೆ ನೋಟಿಸ್: ಜಿಲ್ಲಾಧಿಕಾರಿ ಘೋಷ್

Rashmi Kasaragodu
Updated On : 26 Apr 2013, 11:19 am

ಕನ್ನಡಪ್ರಭ ವಾರ್ತೆ, ರಾಯಚೂರು, ಏ.25
ದೇವದುರ್ಗದಲ್ಲಿ ನೋಂದಣಿ ಸಂಖ್ಯೆಯ ಮಾಹಿತಿ ನೀಡುವ ನಂಬರ್ ಪ್ಲೇಟ್ ಇಲ್ಲದ ಹೊಸ ವಾಹನಗಳ ಬಗ್ಗೆ ನೋಂದಣಿಯತ್ತ ನಿರ್ಲಕ್ಷ್ಯ ತೋರಿದ ಆರ್ಟಿಒಗೆ ನೋಟಿಸ್ ನೀಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 58 ನೀತಿ ಸಂಹಿತೆಯ ಉಲ್ಲಂಘನೆಯ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್ಕುಮಾರ್ ಘೋಷ್ ತಿಳಿಸಿದರು.
ನಗರದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವದುರ್ಗದಲ್ಲಿ ಬೈಕ್ ಮತ್ತು ವಿವಿಧ 42 ನೂತನ ವಾಹನಗಳಿಗೆ ನೋಂದಣಿ ಮಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿರುವುದು ಪತ್ತೆಯಾಗಿದೆ. ಅಂಥ ವಾಹನಗಳನ್ನು ರಾಜಕೀಯ ಕಾರ್ಯಕ್ಕೆ ಬಳಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಎಸಗಿದ ಆರ್ಟಿಒಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿ ವಿರುದ್ಧವೇ ಹೆಚ್ಚು: ಜಿಲ್ಲೆಯಲ್ಲಿ ಇದುವರೆಗೆ ನೀತಿ ಸಂಹಿತೆ ಉಲ್ಲಂಘನೆಯ 58 ಕೇಸ್ ದಾಖಲಿಸಲಾಗಿದೆ. ಅತೀ ಹೆಚ್ಚು 17 ಪ್ರಕರಣಗಳನ್ನು ದೇವದುರ್ಗ ತಾಲೂಕಿನಲ್ಲಿ ದಾಖಲಿಸಲಾಗಿದೆ. ಲಿಂಗಸ್ಗೂರಿನಲ್ಲಿ 13 ಪ್ರಕರಣ ದಾಖಲಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಬಿಜೆಪಿ ವಿರುದ್ಧ 17, ಕಾಂಗ್ರೆಸ್ ವಿರುದ್ಧ 9, ಜೆಡಿಎಸ್ 7, ಬಿಎಸ್ಸಾರ್ ಕಾಂಗ್ರೆಸ್ 7, ಕೆಜೆಪಿ 6 ಹಾಗೂ ಸಿಪಿಎಂ ಅಭ್ಯರ್ಥಿ ವಿರುದ್ಧ 1 ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಸಣ್ಣಫಕೀರಪ್ಪ ವಾಹನ ಜಪ್ತಿ: ನಗರದಲ್ಲಿ ಬಿಎಸ್ಸಾರ್ ಕಾಂಗ್ರೆಸ್ನಿಂದ ಆಯೋಜಿಸಿದ್ದ ಪಾದಯಾತ್ರೆ ವೇಳೆ ಗುರುವಾರ ಸಂಸದ ಸಣ್ಣಫಕೀರಪ್ಪ ಅವರಿದ್ದ ಕಾರು ಪರವಾನಗಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿದ್ದ ವಾಹನ ಜಪ್ತಿ ಮಾಡಲಾಗಿದೆ. ಇನ್ನು ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಪೂಜಾಗಾಂಧಿ ಅವರು ಅಸ್ಕಿಹಾಳ ಗ್ರಾಮದಲ್ಲಿ ದೇವಾಲಯಕ್ಕೆ ತೆರಳಿದ ಬಗ್ಗೆ ಮಾಹಿತಿ ಬಂದಿದೆ. ಅವರು ಪ್ರಚಾರ ಕೈಗೊಳ್ಳಲು ತೆರಳಿದ್ದರೇ ಅಥವಾ ಪೂಜೆ ಸಲ್ಲಿಸಲು ತೆರಳಿದ್ದ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಲಾಗಿದೆ. ವರದಿಯಾಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಪ್ರಚಾರಕ್ಕೆ ಮಕ್ಕಳ ಬಳಕೆ: ಮಕ್ಕಳನ್ನು ಚುನಾವಣೆ ಪ್ರಚಾರ ಕಾರ್ಯಕ್ಕೆ ಬಳಸಿದ ದೂರುಗಳ ಹಿನ್ನೆಲೆ ನಗರ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಕೇಸ್ ದಾಖಲಿಸಲಾಗಿದೆ. ಮಕ್ಕಳನ್ನು ಯಾವುದೇ ಕಾರಣಕ್ಕೆ ಪ್ರಚಾರ ಕಾರ್ಯದಲ್ಲಿ ಬಳಸುವಂತಿಲ್ಲ. ಬಳಸಿದ್ದು ಮುಂದಿನ ದಿನಗಳಲ್ಲಿ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದರು.
ನಗದು, ಅಕ್ರಮ ಮದ್ಯ ವಶ: ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 7 ಪ್ರಕರಣಗಳಲ್ಲಿ ದಾಖಲೆಗಳಿಲ್ಲದ ಒಟ್ಟು 41,24,200 ನಗದು ಜಪ್ತಿ ಮಾಡಲಾಗಿದೆ. 43 ಪ್ರಕರಣಗಳಲ್ಲಿ 38 ಜನರನ್ನು ಬಂಧಿಸಿ, ಅವರಿಂದ ಒಟ್ಟು 9,23,418 ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ. ಅದೇ ರೀತಿ ಅಬಕಾರಿ ಇಲಾಖೆಯವರು ನಡೆಸಿದ ದಾಳಿಯಲ್ಲಿ 4,02,800 ಮೌಲ್ಯದ ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಪೊಲೀಸರು ಒಟ್ಟು 1,168 ಗೂಂಡಾ ಪ್ರವೃತ್ತಿಯವರಿಂದ ಚುನಾವಣೆಯ ವೇಳೆ ತನ್ನಡತೆಯ ಬಗ್ಗೆ ಬಾಂಡ್ ಪಡೆದಿದೆ ಎಂದ ಅವರು, ದೇವದುರ್ಗದ ಪೊಲೀಸ್ ಮತ್ತಿತರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರು ಜನ ಅಧಿಕಾರಿಗಳ ವಿರುದ್ಧ ರಾಜಕೀಯ ಪಕ್ಷದ ಪರ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಕಾಂಗ್ರೆಸ್ ದೂರಿದ್ದು, ರಾಜ್ಯ ಚುನಾವಣೆ ಆಯೋಗಕ್ಕೆ ಈ ಬಗ್ಗೆ ದೂರು ಕಳಿಸಿ ಮಾರ್ಗದರ್ಶನಕ್ಕೆ ಕಾಯಲಾಗುತ್ತಿದೆ ಎಂದು ಹೇಳಿದರು.
ಬಹಿಷ್ಕಾರ: ಲಿಂಗಸ್ಗೂರು ತಾಲೂಕಿನ ಮೂರು ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ ಬಗ್ಗೆ ಮಾಹಿತಿಯಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಆ ಗ್ರಾಮಗಳನ್ನು ಲಿಂಗಸ್ಗೂರು ಕ್ಷೇತ್ರಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಏನನ್ನೂ ಹೇಳಲಾಗದು. ಆ ಬಗ್ಗೆಯೂ ಆಯೋಗದ ಗಮನಕ್ಕೆ ತರಲಾಗಿದೆ. ಸಂಬಂಧಿಸಿದ ತಾಲೂಕಿನ ಅಧಿಕಾರಿಗಳು ಗ್ರಾಮಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲಿದ್ದಾರೆಂದು ಹೇಳಿದರು.
ನೀರಿನ ಅಭಾವ: ಜಿಲ್ಲೆಯಲ್ಲಿ ಕುಡಿವ ನೀರಿನ ಅಭಾವವಿರುವ 7 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರೊದಗಿಸಲಾಗುತ್ತಿದೆ. ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜೆಸ್ಕಾಂ ಜತೆ ಈ ಕುರಿತು ಈಗಾಗಲೇ ಚರ್ಚಿಸಿದ್ದು ಕುಡಿವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಮಂಜುಶ್ರೀ, ಎಸ್ಪಿ ಎಸ್.ಬಿ. ಬಿಸನಳ್ಳಿ, ಡಿವೈಎಸ್ಪಿ ಡಾ. ದಿವ್ಯಾ ಗೋಪಿನಾಥನ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement