ಮುದಗಲ್: ಗಾಳಿ- ಮಳೆಗೆ ಅಪಾರ ಹಾನಿ
ಮುದಗಲ್: ಬಿಸಿಲ ಧಗೆಯಿಂದ ಬೆಂದಿದ್ದ ಪಟ್ಟಣದ ಸುತ್ತಮುತ್ತ ಭಾರಿ ಮಳೆ, ಗಾಳಿಗೆ ಅಪಾರ ಹಾನಿ ಉಂಟಾಗಿದೆ.
ಸಮೀಪದ ಮರಳಿ ಗ್ರಾಮದಲ್ಲಿ ದಾಳಿಂಬೆ ಬೆಳೆ ನಾಶವಾಗಿದ್ದರೆ, ಮಟ್ಟೂರು ಗ್ರಾಮದಲ್ಲಿ ಮನೆಗಳಿಗೆ ಹಾಕಿದ ತಗಡುಗಳು ಗಾಳಿಗೆ ಹಾರಿವೆ. ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ಮೇವಿನ ಬಣವೆಗಳು ಹಾಳಾಗಿವೆ.
ಇಲ್ಲಿಗೆ ಸಮೀಪದ ಮರಳಿ ಗ್ರಾಮದಲ್ಲಿ ಶರಣಮ್ಮ ಕನಕಗಿರಿ ಎಂಬವರ 4 ಎಕರೆ ದಾಳಿಂಬೆ ತೋಟ, ಅದೇ ಗ್ರಾಮದ ಶರಣಪ್ಪ ಕನಕಪ್ಪ ಎಂಬವರ 4 ಎಕರೆ ದಾಳಿಂಬೆ ಬೆಳೆ ಗಾಳಿ ಮಳೆಗೆ ಮುರಿದು ಬಿದ್ದು ಕಟಾವಿಗೆ ಬಂದಿದ್ದ ಹಣ್ಣು ನಾಶವಾಗಿದ್ದರಿಂದ ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳೆ ನಾಶವಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ತಿಳಿಸಿದ್ದಾರೆ.
ಸಮೀಪದ ಮಟ್ಟೂರು ಗ್ರಾಮದಲ್ಲಿ ಮಳೆ, ಬಿರುಗಾಳಿಗೆ ಗ್ರಾಮದ ವೀರಭದ್ರಪ್ಪ ಚಲುವಾದಿ, ಹುಸೇನಪ್ಪ ಚಲುವಾದಿ, ಹನುಮಂತ ಚಲುವಾದಿ ಎಂಬವರ ಮನೆಯ ಛಾವಣಿಗೆ ಹಾಕಿದ್ದ ತಗಡಿನ ಶೀಟ್ಗಳು ಗಾಳಿಯಲ್ಲಿ ಹಾರಿಹೋಗಿವೆ. ಇದೇ ವೇಳೆ ಮನೆಯಲ್ಲಿದ್ದ ಮಹಿಳೆಯೊಬ್ಬಳಿಗೆ ಗಾಯಗಳಾಗಿವೆ. ಮನೆಯಲ್ಲಿದ್ದ ದವಸ ಧಾನ್ಯಗಳು ಮಳೆ ನೀರಿನಲ್ಲಿ ನೆನೆದಿವೆ.
ಒತ್ತಾಯ: ಅಕಾಲಿಕ ಮಳೆ, ಬಿರುಗಾಳಿಯಿಂದಾಗಿ ತಾಲೂಕಿನ ಮರಳಿ ಗ್ರಾಮದಲ್ಲಿ ದಾಳಿಂಬೆ ಬೆಳೆ ಅಪಾರ ಹಾನಿ ಸಂಭವಿಸಿದ್ದು ರೈತರು ಕಂಗಾಲಾಗಿದ್ದಾರೆ. ಸರ್ಕಾರ ಈ ಕೂಡಲೇ ಪರಿಹಾರ ನೀಡಬೇಕು. ರೈತರ ಹೆಸರಲ್ಲಿದ್ದ ಬ್ಯಾಂಕ್ ಸಾಲ ಮನ್ನಾ ಮಾಡಬೇಕೆಂದು ರಾಜ್ಯ ರೈತ ಸಂಘದ ಗುಲ್ಬರ್ಗ ವಿಭಾಗಿಯ ಕಾರ್ಯಾಧ್ಯಕ್ಷ ಅಮರಣ್ಣ ಗುಡಿಹಾಳ ಒತ್ತಾಯಿಸಿದ್ದಾರೆ.