ರಸ್ತೆ ಕಾಮಗಾರಿ ಕಳಪೆ; ಸಂಘ ಆರೋಪ
ಲಿಂಗಸ್ಗೂರು: ಲಿಂಗಸ್ಗೂರು- ನಾರಾಯಣಪುರ ರಸ್ತೆ ಕಳಪೆ ಕಾಮಗಾರಿ ಮಾಡಲಾಗುತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಂದು ಬಂಜಾರ ಸಂಘದ ಮುಖಂಡರು ಗುರುವಾರ ಆರೋಪಿಸಿದ್ದಾರೆ.
ಲಿಂಗಸ್ಗೂರು- ನಾರಾಯಣಪುರ ರಸ್ತೆ ಹದಗೆಟ್ಟು ಹಲವು ವರ್ಷಗಳೇ ಕಳೆದು ಜನರ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಭಾಗದ ಜನರ ಬಹುದಿನದ ಬೇಡಿಕೆಯಂತೆ ಇತ್ತೀಚಿಗೆ ಟೆಂಡರ್ ಕರೆದು ಕೋಟ್ಯಂತರ ಅನುದಾನದಲ್ಲಿ ರಸ್ತೆ ಡಾಂಬರೀಕರಣ ಆರಂಭಿಸಲಾಗಿದೆ. ಆದರೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ದೂರಿದ್ದಾರೆ.
ಕಳಪೆ ಕಾಮಗಾರಿ ಹೇಗೆ?: ವೈಟ್ಮಿಕ್ಸ್ನಲ್ಲಿ ಪೌಡರ್, ನೀರು ಹಾಕದೆ ಬಳಸಲಾಗಿದೆ. ಇದರಿಂದ ರಸ್ತೆ ಬಿರುಕು ಬಿಡುವ ಸಾಧ್ಯತೆ ಇರುತ್ತದೆ. ಡಾಂಬರ್ ಪ್ರಮಾಣ ಕಡಿಮೆ ಇದೆ. ಬಿಎಂ ಮಾಡಲು 20 ಎಂಎಂ ಕಂಕರ್ ಬಳಸದೆ 10 ಎಂಎಂ ಕಂಕರ್ ಬಳಸಲಾಗುತ್ತಿದೆ. ಶೀಲ್ಕೋಟ್(ಎಂಎಸ್ಎಸ್) ಮಾಡಲು 6 ಎಂಎಂ ಕಂಕರ್ ಹಾಕುವ ಬದಲು ಉಸುಕು ಬಳಸಲಾಗುತ್ತಿದೆ. ಇದಕ್ಕೆ ಜನಪ್ರತಿನಿಧಿಗಳ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ದೂರಿದರು.
ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹ: ಕೂಡಲೇ ಅಧಿಕಾರಿಗಳು ಎಚ್ಚೆತ್ತು ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಬಂಜಾರ ಸಂಘದ ಮುಖಂಡರಾದ ದೇವಪ್ಪ ರಾಠೋಡ, ರಾಜು ಚೌಹಾಣ, ಬಾಲಪ್ಪ ರಾಠೋಡ, ಹರೀಶ ರಾಠೋಡ ಆರೋಪಿಸಿದರು.