ಸಣ್ಣ ಫಕೀರಪ್ಪ ವಿರುದ್ಧ ವರಿಷ್ಠರಿಗೆ ದೂರು
ನಗರ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಹೇಳಿಕೆ
ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ ಸಣ್ಣಫಕೀರಪ್ಪ ಅವರು ನಗರದಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷ ಮತ ಯಾಚಿಸಿದ್ದು ಪಕ್ಷ ವಿರೋಧಿ ಕಾರ್ಯವಾಗಿದೆ. ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಮತ್ತೊಂದು ಪಕ್ಷದ ಪರ ಮತ ಯಾಚಿಸಬಹುದು. ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತಂದು ಪಕ್ಷದಿಂದ ಉಚ್ಚಾಟಿಸಲು ಮನವಿ ಮಾಡುವುದಾಗಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಹೇಳಿದರು.
ಅವರು ಗುರುವಾರ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿ, ರಾಯಚೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ ಅವರಿಗೆ ಮತ್ತೊಂದು ಪಕ್ಷದ ಪರ ಪ್ರಚಾರ ಮಾಡುವ ಅಧಿಕಾರವಿಲ್ಲ. ಹಾಗೊಂದು ವೇಳೆ ಬಿಎಸ್ಸಾರ್ ಕಾಂಗ್ರೆಸ್ ಪರ ಒಲವಿದ್ದಲ್ಲಿ ಕೂಡಲೇ ಬಿಜೆಪಿ ತೊರೆದು ಬಿಎಸ್ಸಾರ್ ಕಾಂಗ್ರೆಸ್ ಜತೆ ಗುರುತಿಸಿಕೊಳ್ಳುವಂತೆ ಸವಾಲು ಹಾಕಿದರು.
ಸಂಸದರ ವರ್ತನೆ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಬಿಜೆಪಿ ಹೈಕಮಾಂಡ್ಗೆ ದೂರು ಸಲ್ಲಿಸುವುದಾಗಿ ತಿಳಿಸಿದ ಅವರು, ಈಗಾಗಲೇ ಸಂಸದರಾದ ಬಿ.ವೈ. ರಾಘವೇಂದ್ರ ಹಾಗೂ ಶಿವಕುಮಾರ್ ಉದಾಸಿ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರಿಂದ ಪಕ್ಷ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದು, ರಾಯಚೂರು ಸಂಸದ ಸಣ್ಣ ಫಕೀರಪ್ಪ ವಿರುದ್ಧವೂ ಕ್ರಮಕ್ಕೆ ಒತ್ತಾಯಿಸುವುದಾಗಿ ಅವರು ತಿಳಿಸಿದರು.