ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಸಣ್ಣ'ತನದ ನಡೆಗೆ ಜನರಲ್ಲಿ ಗೊಂದಲ

Rashmi Kasaragodu
Updated On : 26 Apr 2013, 11:20 am

ವಿಶೇಷ ವರದಿ
ಕನ್ನಡಪ್ರಭ ವಾರ್ತೆ    ರಾಯಚೂರು    ಏ.25
ರಾಯಚೂರು ಲೋಕಸಭೆ ಕ್ಷೇತ್ರದ ಸಂಸದ ಸಣ್ಣಫಕೀರಪ್ಪ ಕ್ಷೇತ್ರದಲ್ಲಿ ವಾಸವಾಗಿದ್ದು ಕಡಿಮೆ. ಬಳ್ಳಾರಿಯಲ್ಲಿ ವಾಸ್ತವ್ಯವೇ ಜಾಸ್ತಿ. ಮತದಾರರಿಂದ ಯಾವಾಗಲೂ ದೂರವಿರುವ ಸಂಸದರನ್ನು ಕಾಣುವ ಭಾಗ್ಯ ಗುರುವಾರ ನಗರದ ನಿವಾಸಿಗಳಿಗೆ ಲಭ್ಯವಾಯಿತು. ಬಿಜೆಪಿ ಸಂಸದರಾಗಿರುವ ಅವರು ಬಿಎಸ್ಸಾರ್ ಕಾಂಗ್ರೆಸ್ಗೆ ಮತ ಹಾಕಿ ಎಂದು ಹೇಳಿದ್ದು ಮತದಾರರಲ್ಲಿ ಗೊಂದಲಕ್ಕೆ ಕಾರಣವಾಯಿತು.
ಸಂಸದ ಸಣ್ಣಫಕೀರಪ್ಪ ಅವರು ಆಯ್ಕೆಯಾದ ಸಂದರ್ಭದಿಂದಲೇ ಬಳ್ಳಾರಿಯನ್ನೇ ಕೇಂದ್ರ ಸ್ಥಾನ ಮಾಡಿಕೊಂಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಆಗ ಸಚಿವರಾಗಿದ್ದ ಶ್ರೀರಾಮುಲು ಜತೆ ಬಂದು ಹೋಗಿದ್ದು ಬಿಟ್ಟರೆ, ಕ್ಷೇತ್ರದಲ್ಲಿದ್ದದ್ದು ತೀರಾ ಕಡಿಮೆ. ಹೀಗಾಗಿ ಮತದಾರರಲ್ಲಿ ಅವರ ಬಗ್ಗೆ ಬೇಸರ ನಿರಂತರ ಎಂಬಂಥ ಸ್ಥಿತಿ.
ಬಿಜೆಪಿಗೆ ಸವಾಲು: ಇದುವರೆಗೆ ಬಳ್ಳಾರಿಯಲ್ಲಿ ನಡೆಯುತ್ತಿದ್ದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಸಣ್ಣಫಕೀರಪ್ಪ ಅವರು ಗುರುವಾರ ನಗರದಲ್ಲಿ ಬಹಿರಂಗವಾಗಿಯೇ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಪೂಜಾ ಗಾಂಧಿ ಅವರ ಪರ ಮತ ಯಾಚಿಸುವ ಮೂಲಕ ಬಿಜೆಪಿಗೆ ಸವಾಲೊಡ್ಡಿದ್ದು ಸ್ಪಷ್ಟವಾಗಿದೆ.
ನಗರ ಸೇರಿದಂತೆ ರಾಯಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಅವರು ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಇದುವರೆಗೆ ಕಾಣಿಸಿದ್ದಿಲ್ಲ. ಆದರೆ ಚುನಾವಣೆಯ ಈ ಸಂದರ್ಭದಲ್ಲಿ ಅವರು ಬಹಿರಂಗವಾಗಿಯೇ ಬಿಎಸ್ಸಾರ್ ಕಾಂಗ್ರೆಸ್ಗೆ ಮತ ಹಾಕುವಂತೆ ಮತ ಯಾಚಿಸಿದ್ದು ಮತದಾರರಲ್ಲಿ ಅಚ್ಚರಿ ಹಾಗೂ ಗೊಂದಲಕ್ಕೆ ಕಾರಣವಾಯಿತು.
ಶಿಸ್ತು ಕ್ರಮಕ್ಕೆ ಒತ್ತಾಯ: ಸಂಸದ ಸಣ್ಣಫಕೀರಪ್ಪ 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲವು ಕಂಡವರು. ಬಳ್ಳಾರಿ ರೆಡ್ಡಿ ಸಹೋದರರ ಆಪ್ತರಾದ ಅವರು ಆನಂತರದಲ್ಲಿ ಬಿಜೆಪಿಯಲ್ಲಿದ್ದುಕೊಂಡೇ ಬಿಎಸ್ಸಾರ್ ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವುದು ಕ್ಷೇತ್ರದ ಮತದಾರರಿಗೆ ಗೊಂದಲಕ್ಕೆ ಕಾರಣ. ಕ್ಷೇತ್ರ ವ್ಯಾಪ್ತಿಯ ಮತದಾರರಿಂದ ದೂರವೇ ಉಳಿದಿರುವ ಅವರ ಕಾರ್ಯವೈಖರಿಯ ಬಗ್ಗೆ ಮತದಾರರಲ್ಲಿ ಅಸಮಾಧಾನವಿದೆ.
ಈ ಮಧ್ಯೆ ಬಿಜೆಪಿ ಸಂಸದರಾಗಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷಕ್ಕೆ ಮತ ಯಾಚಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ಅವರು, ಬಿಜೆಪಿಯಲ್ಲಿದ್ದುಕೊಂಡು ಮತ್ತೊಂದು ಪಕ್ಷದ ಪರ ಪ್ರಚಾರ ಕೈಗೊಳ್ಳುವುದನ್ನು ಸಹಿಸಲಾಗದು. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಗಮನಕ್ಕೆ ತರಲಾಗುತ್ತದೆ. ಶಿಸ್ತು ಕ್ರಮಕ್ಕೆ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ನಗರ ವಿಧಾನಸಭೆ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯ ಅಸಮಾಧಾನದಿಂದ ಕೆಲವರು ಪಕ್ಷ ತೊರೆದಿದ್ದಾರೆ. ಈಗ ಬಿಜೆಪಿ ಸಂಸದ ಸಣ್ಣಫಕೀರಪ್ಪ ಬಿಎಸ್ಸಾರ್ ಕಾಂಗ್ರೆಸ್ ಪರ ಮತ ಯಾಚಿಸುವ ಮೂಲಕ ಬಹಿರಂಗವಾಗಿಯೇ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. ಬಿಜೆಪಿ ಈ ನಿಟ್ಟಿನಲ್ಲಿ ಯಾವ ಕ್ರಮ ಜರುಗಿಸುತ್ತದೆ ಎಂಬುದು ಕುತೂಹಲದ ಸಂಗತಿ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement