ಸಿರವಾರ; ಬಿರುಗಾಳಿಗೆ ಹಾರಿದ ಶೀಟುಗಳು
ರಾಯಚೂರು: ಮಾನವಿ ತಾಲೂಕಿನ ಸಿರವಾರ ಹಾಗೂ ಅದರ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಜೆ ಭಾರಿ ಬಿರುಗಾಳಿ ಬೀಸಿ ಮನೆಗೆ ಹೊದಿಸಿದ ತಗಡಿನ ಶೀಟುಗಳು ಕಿತ್ತು ಹಾರಿಹೋದ ಘಟನೆ ನಡೆದಿದೆ.
ಸಿರವಾರದಲ್ಲಿ ಗುರುವಾರ ಸಂಜೆಯಾಗುತ್ತಿದ್ದಂತೆಯೇ ಬಿರುಗಾಳಿ ಬೀಸಿದ್ದರಿಂದ ವಿದ್ಯುತ್ ಕಂಬಗಳು ಧರೆಗುರುಳಿದವು. ಗ್ರಾಮದ ಅನೇಕ ಮನೆಗಳಿಗೆ ಹೊದಿಸಿದ್ದ ತಗಡಿನ ಶೀಟುಗಳು ಗಾಳಿಯಲ್ಲಿ ಹಾರಾಡಿದ ಬಗ್ಗೆ ವರದಿಯಾಗಿದೆ. ಇದೇ ವೇಳೆ ಮಾನವಿ ತಾಲೂಕಿನ ಕುರ್ಡಿ, ಕಲ್ಲೂರು, ಅತ್ತನೂರು ಗ್ರಾಮಗಳಲ್ಲಿ ಬಿರುಸಾದ ಮಳೆ ಸುರಿದಿದೆ. ಏಪ್ರಿಲ್ ತಿಂಗಳ ಆರಂಭದಿಂದಲೇ ಬಿರುಬಿಸಿಲ ತಾಪದಿಂದ ಬೇಸತ್ತಿದ್ದ ಜನತೆಗೆ ಕಳೆದ ಎರಡು ದಿನಗಳಿಂದ ಸಂಜೆ ವೇಳೆ ಮಳೆಯಾಗುತ್ತಿರುವುದು ಸಂತಸ ತಂದಿದೆ. ಸಿರವಾರದಲ್ಲಿ ಬೀಸಿದ ಬಿರುಗಾಳಿಯಿಂದ ಯಾರಿಗೂ ಹಾನಿಯಾದ ಬಗ್ಗೆ ತಿಳಿದುಬಂದಿಲ್ಲ.