ಚುನಾವಣೆ ಲಾಭಕ್ಕೆ 'ಚೀಟಿ' ಆರೋಪ
ರಾಯಚೂರು: ಕೆಜೆಪಿ ಮುಖಂಡ ವಿಜಯ ಸಂಕೇಶ್ವರ ಮಾಡಿರುವ ಚೀಟಿ ಅಕ್ರಮದ ಆರೋಪವು ಚುನಾವಣೆ ಹಿನ್ನೆಲೆಯಲ್ಲಿ ಮಾಡಿದ್ದಾಗಿದೆ. ಸುಳ್ಳು ಆರೋಪವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಕೆಜೆಪಿ ಮುಖಂಡರು ಅನಗತ್ಯವಾಗಿ ಬಿಜೆಪಿ ನಾಯಕರ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಆದರೆ ಆ ಪಕ್ಷದ ನಾಯಕ ಯಡಿಯೂರಪ್ಪ ಅವರ ವಿರುದ್ಧವೇ ಲೋಕಾಯುಕ್ತರಲ್ಲಿ ಪ್ರಕರಣವಿದೆ. ಅಂಥವರು ನೀಡುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದಿರುವುದೇ ಲೇಸು ಎಂದು ಹೇಳಿದರು.
ಹುರುಳಿಲ್ಲದ ಆರೋಪ: ಸಂಕೇಶ್ವರ ಅವರು ಮಾಡಿದ ಆರೋಪದಲ್ಲಿ ಹುರುಳಿಲ್ಲ. ಸಂಕೇಶ್ವರ ಬಿಡುಗಡೆ ಮಾಡಿದ ಚೀಟಿಯಲ್ಲಿನ ಕೈಬರೆಹದ ಬಗ್ಗೆ ತನಿಖೆಯಾಗಲೆಂದು ಈಗಾಗಲೇ ಸದಾನಂದಗೌಡರು ಒಪ್ಪಿದ್ದಾರೆ. ಆದರೆ ಕೆಜೆಪಿಗೆ ಅದರಲ್ಲಿ ಆಸಕ್ತಿಯಿಲ್ಲ. ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆಂದು ಹೇಳಿದರು.
ವರಿಷ್ಠರಿಂದ ಕ್ರಮ: ನಗರದಲ್ಲಿ ರಾಯಚೂರು ಸಂಸದ ಸಣ್ಣಫಕೀರಪ್ಪ ಮತ್ತು ಬಳ್ಳಾರಿಯಲ್ಲಿ ಸಂಸದೆ ಶಾಂತಾ ಅವರು ಬಿಎಸ್ಸಾರ್ ಕಾಂಗ್ರೆಸ್ ಪರ ಪ್ರಚಾರ ಕೈಗೊಂಡಿರುವುದು ಗಮನಕ್ಕೆ ಬಂದಿದೆ. ಈ ಇಬ್ಬರನ್ನೂ ಈಗಾಗಲೇ ಪಕ್ಷದ ಸಂಸದೀಯ ಮಂಡಳಿಯಿಂದ ಅಮಾನತು ಮಾಡಲಾಗಿದೆ ಎಂದು ಹೇಳಿದರು.