ಜೆಡಿಎಸ್ ಗೆಲವಿಗೆ 'ಕೈ', ಬಿಎಸ್ಸಾರ್ ಅಡ್ಡಗಾಲು
ಕನ್ನಡಪ್ರಭ ವಾರ್ತೆ ಸಿಂಧನೂರು ಏ.26
ಜಿಲ್ಲೆಯಲ್ಲಿಯೇ ಜಿದ್ದಾಜಿದ್ದಿಯ ರಾಜಕೀಯ ಕಣವಿದು. ಅದರಲ್ಲೂ ಈ ಬಾರಿಯ ಚುನಾವಣೆಯ ಕಣದಲ್ಲಿ ಘಟಾನುಘಟಿಗಳಿರುವುದು ರಾಜಕೀಯ ರಂಗೇರಿಸಿದೆ. ಜೆಡಿಎಸ್‌ಗೆ ಕಾಂಗ್ರೆಸ್, ಕೆಜೆಪಿ, ಬಿಎಸ್ಸಾರ್ ಮತ್ತು ಬಿಜೆಪಿ ಪಕ್ಷಗಳು ಪ್ರಬಲ ಪೈಪೋಟಿ ನೀಡುತ್ತಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳಿಂದ ರಾಜಕೀಯ ಮೇಲಾಟ ಆರಂಭಗೊಂಡಿದೆ.
ಸಿಂಧನೂರು ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೇರಿದಂತೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ರಾಜ್ಯ ನಾಯಕರು ಆಗಮಿಸಿ ರಾಜಕೀಯ ಕಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಪರಿಣಾಮ ಎಲ್ಲರ ಕಣ್ಣು ಸಿಂಧನೂರಿನ ರಾಜಕೀಯ ಕಣದತ್ತಲೇ ಎಂಬಂಥ ಸ್ಥಿತಿ.
2,85,054 ಮತದಾರರು: ಸಿಂಧನೂರು ಕ್ಷೇತ್ರದಲ್ಲಿ ಒಟ್ಟು 2,85,054 ಮತದಾರರಿದ್ದಾರೆ. ಅವರಲ್ಲಿ 1,43,071 ಪುರುಷ ಹಾಗೂ 1,41,983 ಮಹಿಳಾ ಮತದಾರರಿದ್ದಾರೆ. 2008ರ ಚುನಾವಣೆಯಲ್ಲಿ ಹಂಪನಗೌಡ ಬಾದರ್ಲಿ ಅವರು ಜೆಡಿಎಸ್‌ನ ವೆಂಕಟರಾವ್ ನಾಡಗೌಡರಿಂದ ಸುಮಾರು 16 ಸಾವಿರ ಮತಗಳಿಂದ ಸೋತಿದ್ದರು.
ಆಗ ಉತ್ತರ- ದಕ್ಷಿಣದಂತಿದ್ದ ಕೆ. ವಿರೂಪಾಕ್ಷಪ್ಪ ಹಾಗೂ ಹಂಪನಗೌಡ ಬಾದರ್ಲಿ ಅವರು ಅಧಿಕಾರಕ್ಕಾಗಿ ಒಂದಾಗಿದ್ದನ್ನು ಸಹಿಸದ ಅವರ ಕಾರ್ಯಕರ್ತರು ಇಬ್ಬರಿಗೂ ಬುದ್ಧಿ ಕಲಿಸಬೇಕೆಂಬ ತೀರ್ಮಾನಿಸಿದ್ದರಿಂದ ಆಗಷ್ಟೇ ಕಣದಲ್ಲಿದ್ದ ಹಾಗೂ ವಿಜನ್-2020 ಎಂಬ ಹೊಸ ಅಸ್ತ್ರದೊಂದಿಗೆ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದ ಜೆಡಿಎಸ್‌ನ ವೆಂಕಟರಾವ್ ನಾಡಗೌಡರು ಗೆಲವಿಗೆ ಕಾರಣವಾಯಿತು.
ತಕ್ಕಮಟ್ಟಿಗೆ ಅಭಿವೃದ್ಧಿ: ಹಾಲಿ ಶಾಸಕ ವೆಂಕಟರಾವ್ ನಾಡಗೌಡರು ಶಾಸಕರಾದ ಮೇಲೆ ಅನೇಕ ಗ್ರಾಮಗಳಲ್ಲಿ ಸರ್ವಋತು ರಸ್ತೆಗಳನ್ನು, ಕೆಲ ಕುಗ್ರಾಮಗಳಿಗೂ ಬಸ್‌ಗಳ ವ್ಯವಸ್ಥೆ, ಕುಡಿವ ನೀರಿನ ಕೆರೆ, ಶಾಲಾ ಕಾಲೇಜು, 1 ಉರ್ದು ಪ್ರೌಢಶಾಲೆ ಆರಂಭಕ್ಕೆ ಕಾರಣರಾಗಿದ್ದಾರೆ. ತಕ್ಕಮಟ್ಟಿಗೆ ಕೆಲ ಅಭಿವೃದ್ಧಿ ಕಾರ್ಯ ಮಾಡಿರುವ ಶಾಸಕ ನಾಡಗೌಡರು, ಈ ಬಾರಿಯ ಚುನಾವಣೆಯಲ್ಲಿ ಪುನಾ ಜೆಡಿಎಸ್‌ನಿಂದಲೇ ಕಣದಲ್ಲಿದ್ದಾರೆ.
ಅವರಿಗೆ ಪೈಪೋಟಿಯಾಗಿ ಕಾಂಗ್ರೆಸ್‌ನಿಂದ ಬಾದರ್ಲಿ ಹಂಪನಗೌಡ, ಬಿಎಸ್ಸಾರ್ ಕಾಂಗ್ರೆಸ್‌ನಿಂದ ಕೆ. ಕರಿಯಪ್ಪ, ಕೆಜೆಪಿಯಿಂದ ರಾಜಶೇಖರ್ ಪಾಟೀಲ್, ಬಿಜೆಪಿಯಿಂದ ಕೊಲ್ಲಾ ಶೇಷಗಿರಿರಾವ್ ಅವರು ಕಣದಲ್ಲಿದ್ದು, ಮೇಲ್ನೋಟಕ್ಕೆ ಐವರ ಮಧ್ಯೆ ಪೈಪೋಟಿಯಿರುವುದು ಕಂಡುಬಂದಿದೆ.
ತ್ರಿಕೋನ ಸ್ಪರ್ಧೆ: ಆದರೆ ಕೊನೆಗೆ ಕಾಂಗ್ರೆಸ್- ಜೆಡಿಎಸ್- ಬಿಎಸ್ಸಾರ್ ಕಾಂಗ್ರೆಸ್ ಮಧ್ಯೆಯೇ ಗೆಲವಿನ ಹೋರಾಟ ನಿಶ್ಚಿತ. ಜೆಡಿಎಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ವೆಂಕಟರಾವ್ ನಾಡಗೌಡರ ಗೆಲವಿಗೆ ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ ತೊಡರುಗಾಲು ಹಾಕುವ ಎಲ್ಲ ಲಕ್ಷಣಗಳಿವೆ. ಬಿಎಸ್ಸಾಆರ್ ಕಾಂಗ್ರೆಸ್‌ನ ಕೆ.ಕರಿಯಪ್ಪನವರ ಸ್ಪರ್ಧೆಯನ್ನು ಕಡೆಗಣಿಸುವಂತಿಲ್ಲ.
ಅಲ್ಪಸಂಖ್ಯಾತರೇ ನಿರ್ಣಾಯಕರು: ಕ್ಷೇತ್ರದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಮತದಾರರಿರುವ ಅಲ್ಪಸಂಖ್ಯಾತರೇ ನಿರ್ಣಾಯಕರು. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಜೆಡಿಎಸ್‌ನ ನಾಡಗೌಡರ ಕೈಹಿಡಿದಿದ್ದರು. ಇದಲ್ಲದೇ ಬಹುತೇಕ ಕುರುಬ ಸಮಾಜದವರು ಬೆಂಬಲಿಸಿದ್ದರಿಂದ ಅವರ ಗೆಲವು ನಿರಾಯಾಸವಾಗಿತ್ತು.
ಕಾಂಗ್ರೆಸ್ ಈಚೆಗೆ ನಡೆದ ನಗರಸಭೆಯ ಚುನಾವಣೆಯಲ್ಲಿ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದಿದೆ. ಅದೇ ಭರವಸೆಯಿಂದ ಸದ್ಯದ ಚುನಾವಣೆಗೆ ಸಜ್ಜಾಗಿದೆ. ಬಿಎಸ್ಸಾರ್ ಕಾಂಗ್ರೆಸ್‌ನ ಕೋರ್ ಕಮಿಟಿ ಸದಸ್ಯ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಈ ಬಾರಿ ತಮ್ಮ ಸಹೋದರನ ಪುತ್ರ ಕೆ.ಕರಿಯಪ್ಪರನ್ನು ತಮ್ಮ ಪಕ್ಷದಿಂದ ಕಣಕ್ಕಿಳಿಸಿದ್ದು, ಅವರ ಗೆಲವಿಗೆ ವಿಶೇಷ ಶ್ರಮ ಹಾಕುತ್ತಿದ್ದಾರೆ.
ಒಟ್ಟು 14 ಜನರಿರುವ ಕಣದಲ್ಲಿ ಸ್ಪರ್ಧಿಸಿರುವ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡರಿಗೆ ಎಲ್ಲ ಕ್ಷೇತ್ರಗಳಲ್ಲಿರುವಂತೆ ಆಡಳಿತ ಶಾಸಕರ ವಿರೋಧಿ ಅಲೆ ಹೆಚ್ಚಿದೆ. ಮೇಲ್ನೋಟಕ್ಕೆ ಐವರ ಮಧ್ಯೆ ಸ್ಪರ್ಧೆಯಿದ್ದರೂ ತೆರೆಮರೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಮಧ್ಯೆಯೇ ಪ್ರಬಲ ಸ್ಪರ್ಧೆಯಿದೆ. ಮತದಾರರು ಯಾರ ಕೈ ಹಿಡಿಯುತ್ತಾರೆಂಬುದು ಭವಿಷ್ಯ ದಿನಗಳು ನಿರ್ಧರಿಸಲಿವೆ.