ಪಕ್ಷ ಸಂಘಟನೆಗೆ ಕಾರ್ಯಕರ್ತರ ಪ್ರಾಮಾಣಿಕ ಸೇವೆ ಅಗತ್ಯ: ಅನ್ವರಿ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಏ.26
ಪಕ್ಷ ಸಂಘಟನೆಗೆ ಕಾರ್ಯಕರ್ತರ ಪ್ರಾಮಾಣಿಕ ಸೇವೆ ಅಗತ್ಯವಾಗಿದೆ. ಇದು ಚುನಾವಣೆಯಲ್ಲಿ ಅಭ್ಯರ್ಥಿ ಗೆಲವಿಗೆ ಸಹಕಾರಿ ಎಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ ತಿಳಿದರು.
ಪಟ್ಟಣದ ಕೆಜೆಪಿ ಕಚೇರಿಯಲ್ಲಿ ಶುಕ್ರವಾರ ವಿವಿಧ ಪಕ್ಷ ತೊರೆದು ಕೆಜೆಪಿ ಸೇರ್ಪಡೆಗೊಂಡ ಮುಖಂಡರನ್ನು ಬರಮಾಡಿಕೊಂಡು ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಕ್ಷೇತ್ರದ ಅಭ್ಯರ್ಥಿ ಎಚ್.ಬಿ. ಮುರಾರಿ ಗೆಲುವು ಖಚಿತವಾಗಿದ್ದು, ಇವರ ಗೆಲವಿಗೆ ಪಕ್ಷದ ಕಾರ್ಯಕರ್ತರ ಪರಿಶ್ರಮ ಪ್ರಮುಖವಾಗಿದೆ ಎಂದರು.
ಯಾವುದೇ ಒಂದು ಪಕ್ಷ ಸಂಘಟನೆಗೆ ಕಾರ್ಯಕರ್ತರ ಸರಳತೆ ಮತ್ತು ಪ್ರಾಮಾಣಿಕತೆ ಅಗತ್ಯವಾಗಿದ್ದು, ವ್ಯಕ್ತಿಗತ ಆರೋಪ ಮಾಡುವುದನ್ನು ಬಿಟ್ಟು, ಪಕ್ಷದ ಸಿದ್ಧಾಂತ ಪಾಲನೆ ಮಾಡುವ ಜೊತೆಗೆ ಕ್ಷೇತ್ರದ ಅಭ್ಯರ್ಥಿ ಪರ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಬೇಕೆಂದು ಕರೆ ನೀಡಿದರು. ಪಕ್ಷದ ಜಿಲ್ಲಾಧ್ಯಕ್ಷ ವೆಂಕನಗೌಡ ಮಲ್ಕಾಪುರ, ತಾಲೂಕು ಅಧ್ಯಕ್ಷ ದೊಡ್ಡಬಸಪ್ಪ ಅಂಗಡಿ, ಲಿಂಗಸ್ಗೂರು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಚ್.ಬಿ. ಮುರಾರಿ, ಮಸ್ಕಿ ಕ್ಷೇತ್ರದ ಅಭ್ಯರ್ಥಿ ಮಹಾದೇವಪ್ರಗೌಡ, ಮುಖಂಡರಾದ ಹನುಮಂತಪ್ಪ ತೊಗರಿ, ವೀರನಗೌಡ ಕಾರಲಕುಂಟಿ, ರಮೇಶ ಶಾಸ್ತ್ರಿ, ಶರಣಗೌಡ ಬಸಾಪುರ ಸೇರಿದಂತೆ ಇದ್ದರು.
ದಲಿತ ಸಂಘರ್ಷ ಸಮಿತಿಗೆ ನೇಮಕ
ದೇವದುರ್ಗ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರಾಗಿ ನಟರಾಜ ಅಕ್ಕರಿಕಿ ನೇಮಕಗೊಂಡಿದ್ದಾರೆ. ಈ ಕುರಿತು ಜಿಲ್ಲಾ ಸಮಿತಿಯ ಮಹಾದೇವಪ್ಪ ಬುದ್ಧಿನ್ನಿ, ರಾಮಣ್ಣ ಹುಲಿಮನಿ ಪ್ರಕಟಣೆ ನೀಡಿ, ತಾಲೂಕ ಸಮಿತಿಯ ಉಪಾಧ್ಯಕ್ಷರಾಗಿ ಆನಂದ ಭಂಡಾರಿ, ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ ಹುಲಿಗುಡ್ಡ, ಖಜಾಂಚಿಯಾಗಿ ರಂಗಪ್ಪ ಭಂಡಾರಿ ಜೇರಬಂಡಿ, ಭೀಮಣ್ಣ ಖಾನಾಪೂರ ನೇಮಕಗೊಂಡಿದ್ದಾರೆ. ಅದೇ ರೀತಿ ನಗರ ಘಟಕದ ಅಧ್ಯಕ್ಷರಾಗಿ ಮರಿಲಿಂಗಸ್ವಾಮಿ ಅಕ್ಕರಕಿ, ಉಪಾಧ್ಯಕ್ಷರಾಗಿ ವಿಜಯ ಬಲ್ಲಿದವ್, ಕಾರ್ಯದರ್ಶಿಯಾಗಿ ರವಿ ಮ್ಯಾತ್ರಿ, ಖಜಾಂಚಿಯಾಗಿ ವಸಂತಕುಮಾರ, ಗೌರವಾಧ್ಯಕ್ಷರಾಗಿ ಮಲ್ಲೇಶಿ ಅಕ್ಕರಕಿ ನೇಮಕಗೊಂಡಿದ್ದಾರೆಂದು ತಿಳಿಸಿದ್ದಾರೆ.