ಮಳೆ: ನೆಲಕ್ಕೊರಗಿದ ಬಾಳೆ, ಮಾವಿನ ಫಸಲು
ಚಿಂಚೋಳಿ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಬಿರುಗಾಳಿ, ಮಿಂಚು ಮತ್ತು ಸಿಡಿಲಿನ ಕೂಡಿದ ಅಕಾಲಿಕ ಮಳೆ ಬೀಳುತ್ತಿದ್ದು, ಅನೇಕ ಗ್ರಾಮಗಳಲ್ಲಿ ರೈತರು ಬೆಳೆದ ಬಾಳೆ ಬೆಳೆ ಮತ್ತು ಮಾವಿನ ಮರಗಳು ನೆಲಕ್ಕುರುಳಿ ಅಪಾರ ಹಾನಿಯಾಗಿದೆ.
ತಾಲೂಕಿನಲ್ಲಿ ವೀಳ್ಯದೆಲೆಗೆ ಹೆಸರು ಪಡೆದಿರುವ ದೇಗಲಮಡಿ ಗ್ರಾಮದ ಅನೇಕ ರೈತರ ಹೊಲದಲ್ಲಿ ಬೆಳೆದಿರುವ ಬಾಳೆ ಗಿಡಗಳು ಮತ್ತು ಈರುಳ್ಳಿ ಹೂವು ಬಿರುಗಾಳಿ ಹಾಗೂ ಮಳೆಗೆ ನೆಲಕ್ಕೆ ಬಿದ್ದು ಹಾಳಾಗಿವೆ. ಈ ಪೈಕಿ ಗ್ರಾಮದ ಮಲ್ಲಿಕಾರ್ಜುನ ಕಂಠೆಪ್ಪ ರಾಚೋಟಿ ಎಂಬುವವರಿಗೆ ಸೇರಿದ 2 ಎಕರೆ ಜಮೀನಿನಲ್ಲಿ 2,500 ಬಾಳೆ ಗಿಡಗಳಲ್ಲಿ 300ಕ್ಕೂ ಹೆಚ್ಚು ಗಿಡಗಳು ನೆಲಕ್ಕೊರಗಿವೆ. ಇದರಿಂದಾಗಿ ಒಟ್ಟು 30 ಸಾವಿರ ನಷ್ಟವಾಗಿದೆ.
ಪಟಪಳ್ಳಿ, ಚಂದ್ರಂಪಳ್ಳಿ, ಕೊಳ್ಳೂರು, ನಾಗಾಇದಲಾಯಿ, ಅಣವಾರ, ಚಿಮ್ಮನಚೋಡ, ರಟಕಲ್, ಕೋಡ್ಲಿ, ಪೋಲಕಪಳ್ಳಿ, ಎಂಪಳ್ಳಿ, ಚಿಂಚೋಳಿ, ಸುಲೇಪೇಟ್, ನಾವದಗಿ, ಕನಕಪುರ, ಚಿಮ್ಮಿಇದಲಾಯಿ ಮುಂತಾದ ಗ್ರಾಮಗಳಲ್ಲಿ ರೈತರ ಬಾಳೇಗಿಡಗಳು ಮಳೆಯಿಂದ ಹಾನಿಯಾಗಿರುವ ವರದಿಯಾಗಿದೆ. ರೈತರು ಅಕಾಲಿಕ ಮಳೆಯಿಂದ ಹಾನಿಯಾಗಿದ್ದರು ಸಹ ಒಬ್ಬ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ರೈತರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.
ಜೆಸ್ಕಾಂಗೆ ಹಾನಿ
ಚಿಂಚೋಳಿ: ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ಪರಿವರ್ತಕಗಳು ಹಾನಿಯಾಗಿವೆ ಎಂದು ಜೆಸ್ಕಾಂ ಎಇಇ ಪರಮೇಶ್ವರ ಬಿರಾದಾರ ತಿಳಿಸಿದ್ದಾರೆ. ತಾಲೂಕಿನಲ್ಲಿ ಬುಧವಾರ ಮತ್ತು ಗುರುವಾರ ಬಿದ್ದ ಅಕಾಲಿಕ ಮಳೆಯಿಂದಾಗಿ ಭೋಗಾಲಿಂಗದಳ್ಳಿ ಗ್ರಾಮದಲ್ಲಿ 4 ವಿದ್ಯುತ್ ಕಂಬಗಳು ಮತ್ತು ಚಿಂಚೋಳಿಯಲ್ಲಿ 2, ಮಿರಿಯಾಣದಲ್ಲಿ 1, ಚಿಮ್ಮನಚೋಡನಲ್ಲಿ 1 ವಿದ್ಯುತ್ ಪರಿವರ್ತಗಳು(ಟಿಸಿ) ಸಿಡಿಲಿನಿಂದ ಸುಟ್ಟು ಹೋಗಿವೆ. ಒಟ್ಟು 35 ವಿದ್ಯುತ್ ಕಂಬಗಳು ಹಾನಿಯಾಗಿವೆ ಎಂದು ತಿಳಿಸಿದ್ದಾರೆ.
ದೇವದುರ್ಗ; ಕೆಜೆಪಿಗೆ ನೇಮಕ
ದೇವದುರ್ಗ: ಕರ್ನಾಟಕ ಜನತಾ ಪಕ್ಷದ ತಾಲೂಕು ಘಟಕದ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಕೆಂಗಲ್ ನೇಮಕಗೊಂಡಿದ್ದಾರೆ. ಈ ಕುರಿತು ಕೆಜೆಪಿ ತಾಲೂಕು ಅಧ್ಯಕ್ಷ ಭೀಮಸೇನರಾವ್ ಪಾಟೀಲ್ ಪ್ರಕಟಣೆ ನೀಡಿದ್ದು, ತಾಲೂಕಿನಲ್ಲಿ ಪಕ್ಷ ಸಂಘಟನೆ ಮತ್ತು ಜವಾಬ್ದಾರಿ ವಹಿಸಿಕೊಂಡು ಪಕ್ಷದ ಬಲವರ್ಧನೆಗೆ ಸ್ಪಂದಿಸಿ ಕಾರ್ಯೋನ್ಮುಖರಾಗಲು ಸೂಚಿಸಿದ್ದಾರೆ.
ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು
ಗುಲ್ಬರ್ಗ: ಲಾರಿಯಲ್ಲಿದ್ದ ಕಿರಣಾ ಸಾಮಾನುಗಳನ್ನು ಇಳಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿ ತಗಲಿ ಕಾರ್ಮಿಕನೊಬ್ಬ ಸಾವಿಗೀಡಾದ ಘಟನೆ ಶಹಾಬಾದ್ನಲ್ಲಿ ನಡೆದಿದೆ. ಯಲ್ಲಪ್ಪ ಎಂಬಾತ ಸಾವಿಗೀಡಾದ ನತದೃಷ್ಟ ಕಾರ್ಮಿಕ. ಶಹಾಬಾದ್ ಫೇಮಸ್ ಕಿರಣಾ ಅಂಗಡಿ ಎದುರು ನಿಲ್ಲಿಸಿದ ಲಾರಿಯಿಂದ ಯಲ್ಲಪ್ಪ ಕಿರಣಾ ಸಾಮಾನುಗಳನ್ನು ಇಳಿಸುತ್ತಿರುವಾಗ ಲಾರಿ ಮೇಲಿಂದ ವಿದ್ಯುತ್ ತಂತಿ ತಗಲಿ ಆತ ಮೃತಪಟ್ಟಿದ್ದಾನೆ. ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ಕಳ್ಳತನ
ಜೇವರ್ಗಿ: ತಾಲೂಕಿನ ಗಂವ್ಹಾರ ಗ್ರಾಮದಲ್ಲಿ ಗುರುವಾರ ರಾತ್ರಿ ಮನೆಯೊಂದರ ಕಳ್ಳತನವಾಗಿದೆ. ಮನೆಯ ಮಹಡಿ ಮೇಲೆ ಮಾಲೀಕ ಶಿವಪ್ಪ ಬಸಪ್ಪ ನಾಯ್ಕೋಡಿ ಮಲಗಿದ್ದರು. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಕಳ್ಳರು ಮನೆಗೆ ಕನ್ನ ಹಾಕಿ 2.30 ಲಕ್ಷ ನಗದು, 30 ಗ್ರಾಂ. ಚಿನ್ನ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಹತ್ತಿ ಮಾರಾಟ ಮಾಡಿ ರೈತ ಶಿವಪ್ಪ ನಾಯ್ಕೋಡಿ ಹಣವನ್ನು ಮನೆಯಲ್ಲಿ ಇಟ್ಟಿದ್ದ ಎನ್ನಲಾಗಿದೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ರಾಮಣ್ಣ ಸಾವಳಗಿ, ಪಿಎಸ್ಐ ಸುಧೀರ ಬೆಂಕಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.