ರಾಜ್ಯದ ದುಸ್ಥಿತಿಗೆ ಪ್ರಮುಖ ಪಕ್ಷಗಳೇ ಹೊಣೆ
ಕನ್ನಡಪ್ರಭ ವಾರ್ತೆ ರಾಯಚೂರು ಏ.26
ರಾಜ್ಯದ ಇಂದಿನ ದುಸ್ಥಿತಿಗೆ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರಣ. ದುರಾಡಳಿತ, ಭ್ರಷ್ಟಾಚಾರ, ಜನವಿರೋಧಿ ನೀತಿಗಳು, ಅಕ್ರಮಗಳಿಂದಾಗಿ ರಾಜ್ಯದ ಶ್ರೀಸಾಮಾನ್ಯನ ಪರಿಸ್ಥಿತಿ ಕೇಳುವವರಿಲ್ಲ ಎಂದು ಎಸ್ಯುಸಿಐ-ಸಿ ಪಕ್ಷದ ರಾಜ್ಯ ಕಾರ್ಯದರ್ಶಿ ರಾಧಾಕೃಷ್ಣ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಸಂಪತ್ತಿನ ನಿರಂತರ ಲೂಟಿ ವಿಚಾರದಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಯಾವುದೇ ಭಿನ್ನತೆಯಿಲ್ಲ. ಜಾಗತೀಕರಣ, ಉದಾರೀಕರಣ, ಖಾಸಗೀಕರಣವೆಂಬ ಕಡು ಬಂಡವಾಳಶಾಹಿಗಳ ಪರವಾದ ಈ ಪಕ್ಷಗಳ ನಿಲುವು ಜನವಿರೋಧಿ ನೀತಿಗಳ ಜಾರಿಗೆ ದಾರಿ ಮಾಡಿದೆ ಎಂದು ಟೀಕಿಸಿದರು.
ಅನಾಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ: ರಾಜ್ಯದಲ್ಲಿ ಬೆಲೆಯೇರಿಕೆ, ಲಕ್ಷಾಂತರ ಉದ್ಯೋಗಗಳ ನಾಶ, ರೈತರ ಆತ್ಮಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯದಂಥ ಅನೇಕ ಅನಾಚಾರಗಳು ನಡೆಸುತ್ತಿದ್ದರೂ ಆಡಳಿತಗಾರರು ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಜನತೆ ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಮಸ್ಯೆಗಳಿಗೆ ಈ ಪಕ್ಷಗಳೇ ನೇರ ಹೊಣೆಯಾಗಿವೆ ಎಂದು ಆರೋಪಿಸಿದರು.
ಅಕ್ರಮ ಗಣಿಗಾರಿಕೆ, ಜಾಮೀನಿಗಾಗಿ ಲಂಚ ಹಗರಣ, ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳು, ಭೂಕಬಳಿಕೆ ಸೇರಿದಂತೆ ಅನೇಕ ಅಕ್ರಮಗಳಲ್ಲಿ ಎಲ್ಲ ಪಕ್ಷಗಳೂ ಶಾಮೀಲಾಗಿವೆ ಎಂದು ಆರೋಪಿಸಿದ ಅವರು, ಎಡಪಕ್ಷಗಳಾದ ಸಿಪಿಐ, ಸಿಪಿಎಂಗಳು ಭ್ರಷ್ಟ ವ್ಯವಸ್ಥೆಯ ವಿರುದ್ಧ ಜನ ಹೋರಾಟವನ್ನು ಬೆಳೆಸುತ್ತಲೇ ಎಲ್ಲ ಎಡವಾದಿ ಪಕ್ಷಗಳನ್ನು ಒಂದುಗೂಡಿಸಿ ಬಂಡವಾಳಶಾಹಿಗಳ ವಿರುದ್ಧ ಪರ್ಯಾಯ ಶಕ್ತಿ ಬೆಳೆಸುವ ಬದಲಿಗೆ ಲೋಕಸತ್ತಾ ದಂಥ ಅವಕಾಶವಾದಿ ಪಕ್ಷದೊಂದಿಗೆ ಕೈಜೋಡಿಸಿರುವುದು ಎಡವಾದಿ ರಾಜಕೀಯಕ್ಕೆ ತೀಲಾಂಜಲಿ ಇಟ್ಟಂತಾಗಿದೆ ಎಂದು ದೂರಿದರು.
ತಕ್ಕಪಾಠ ಕಲಿಸಿ: ಪ್ರಸಕ್ತ ಚುನಾವಣೆಯಲ್ಲಿ ಪಕ್ಷ, ಸಿದ್ಧಾಂತ ಹಾಗೂ ಆದರ್ಶಗಳನ್ನು ಮರೆತಿರುವ ರಾಜಕೀಯ ಪಕ್ಷಗಳ ನಾಯಕರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಣಕವಾಡುವ ರೀತಿಯಲ್ಲಿ ಭರವಸೆ ನೀಡಿ ಘೋಷಣೆಗಳನ್ನು ಹಾಕಲಾಗುತ್ತಿದೆ. ಮತದಾರರು ಇಂಥ ನಾಯಕರ ಬಗ್ಗೆ ಬೇಸರಗೊಂಡು ಮೌನವಹಿಸದೇ ಇಂಥ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸುವ ಕಾರ್ಯ ಮಾಡಬೇಕಿದೆ ಎಂದು ಮನವಿ ಮಾಡಿದರು.
ಪ್ರಸಕ್ತ ಚುನಾವಣೆಯಲ್ಲಿ ಹಣ, ಮದ್ಯ ಮತ್ತು ಗೂಂಡಾಗಳ ಯಾವುದೇ ರೀತಿಯ ಬೆಂಬಲವಿಲ್ಲದೇ ಎಸ್ ಯುಸಿಐ-ಸಿ ಕಣಕ್ಕಿಳಿದಿದೆ. ಈ ಪಕ್ಷ ಗೆಲ್ಲಬಹುದೇ ಎಂಬ ಅನುಮಾನದ ಮಧ್ಯೆಯೂ ಕೆಟ್ಟ ರಾಜಕೀಯ ವ್ಯವಸ್ಥೆಗೆ ಪರ್ಯಾಯವಾಗಿ ಜನತೆಗೆ ತಮ್ಮ ಪಕ್ಷ ನಿಲ್ಲಲಿದೆ. ಬದಲಾವಣೆಯ ಕಾಲ ಬಂದಿದ್ದು, ಈ ಸಂದರ್ಭದಲ್ಲಿ ಮತದಾರರು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮನವಿ ಮಾಡಿದರು.
ಎಚ್ಚರಿಕೆಯಿಂದ ಮತದಾನ ಮಾಡಿ: ಭ್ರಷ್ಟ ವ್ಯವಸ್ಥೆಯ ವಿರುದ್ಧ ಮತ ಹಾಕುವ ನಿಟ್ಟಿನಲ್ಲಿ ಮತದಾರರು ಎಚ್ಚರಿಕೆಯಿಂದ ಮತದಾನ ಮಾಡಬೇಕಿದೆ. ಎಸ್ಯುಸಿಐ-ಸಿ ನಂಥ ಪಕ್ಷಗಳಿಂದ ಪ್ರಾಮಾಣಿಕ ಮತ್ತು ಉತ್ತಮ ಆಡಳಿತ ನೀಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪಕ್ಷದ ಅಭ್ಯಥಿ ಅಪರ್ಣಾ ಬಿ.ಆರ್. ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ರಾಜ್ಯದ ಎಲ್ಲ ಪ್ರಮುಖ ಪಕ್ಷಗಳು ಮಹಿಳೆಯರ ಸ್ಪರ್ಧೆಗೆ ಅವಕಾಶ ನೀಡಿಲ್ಲ. ಆದರೆ ಎಸ್ಯುಸಿಐ-ಸಿ ಪಕ್ಷವು ರಾಜ್ಯದ 11 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು ಅದರಲ್ಲಿ ಐದು ಕ್ಷೇತ್ರದಲ್ಲಿ ಮಹಿಳೆಯರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಅಪರ್ಣಾ ಬಿ.ಆರ್. ಪ್ರಮುಖರಾದ ಡಾ. ಸುನೀತ್ ಕುಮಾರ್, ವೀರೇಶ್. ಎನ್.ಎಸ್. ಮತ್ತಿತರರಿದ್ದರು.