ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಾಸಕರಿಂದ ಅಭಿವೃದ್ಧಿ ಅನುದಾನ ದುರ್ಬಳಕೆ: ಕೆಜೆಪಿ ಆರೋಪ

Rashmi Kasaragodu
Updated On : 27 Apr 2013, 11:10 am

ದೇವದುರ್ಗ: ಹಿಂದುಳಿದ ದೇವದುರ್ಗ ತಾಲೂಕಿನ ಅಭಿವೃದ್ಧಿಗಾಗಿ ಮಾಜಿ ಸಿಎಂ ಯಡಿಯೂರಪ್ಪ ಕೋಟ್ಯಂತರ ರು. ಅನುದಾನ ಒದಗಿಸಿದ್ದರು. ಆದರೆ ಹಾಲಿ ಶಾಸಕ ಶಿವನಗೌಡ ನಾಯಕ ಮಂಜೂರಾದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಕೆಜೆಪಿ ಅಭ್ಯರ್ಥಿ ಶಾಂತಗೌಡ ಆರೋಪಿಸಿದರು.
ಅವರು ಶುಕ್ರವಾರ ತಾಲೂಕಿನ ಜಾಲಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಮತ ಯಾಚಿಸಿ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಭರವಸೆ ನೀಡಿದಂತೆ ಸಾವಿರಾರು ಕೋಟಿ ರು. ಬಿಡುಗಡೆ ಮಾಡಿದ್ದಾರೆ.
ಆದರೆ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕರು ಆ ಅನುದಾನ ಕೊಳ್ಳೆ ಹೊಡೆದರೆಂದು ದೂರಿದರು. ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ಕೆ. ಶಿವನಗೌಡ ನಾಯಕ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಜನ ಸಾಮಾನ್ಯರು ಭಯದಿಂದ ಬದುಕುವಂತೆ ಮಾಡಿದ್ದಾರೆ. ತಮ್ಮ ವಿರುದ್ದ ಧ್ವನಿ ಎತ್ತಿದವರಿಗೆ ಸುಳ್ಳು ಪೊಲೀಸ್ ಕೇಸು ದಾಖಲಿಸಿ ಭಯದ ವಾತಾವರಣ ಮೂಡಿಸಿದ್ದಾರೆಂದು ಟೀಕಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನದ ದುರ್ಬಳಕೆಗೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಮತದಾನ ಕಡ್ಡಾಯವಾಗಲಿ
ಕಡ್ಡಾಯ ಮತದಾನದಿಂದ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ. ಹಾಗೆಯೇ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಮತದಾನ ನಡೆಯಬೇಕು. ಕಡ್ಡಾಯ ಮತದಾನಕ್ಕೆ ಸಂಬಂಧಿಸಿ ಕಾನೂನು ಜಾರಿಯಾಗಬೇಕು. ಅದರಿಂದ ಅನಾಚಾರಕ್ಕೆ ತಡೆ ಬೀಳುತ್ತದೆ. ರಾಜಕೀಯ ಪಕ್ಷಗಳೂ ಸಹ ಜವಾಬ್ದಾರಿ ಮೆರೆಯಬೇಕು. ಅಧಿಕಾರಕ್ಕಾಗಿ ಆಸೆ ಬಿದ್ದು ಟಿಕೆಟ್ ಹಂಚದೇ 15 ವರ್ಷಗಳಿಂದ ಒಂದೇ ಪಕ್ಷದಲ್ಲಿರುವವರಿಗೆ ಆಯಾ ಪಕ್ಷಗಳು ಟಿಕೆಟ್ ನೀಡಿದಲ್ಲಿ ಶಾಸಕರಾದ ನಂತರ ವಲಸೆ ತಡೆಯಲು ಸಾಧ್ಯವಾಗಬಹುದು. ಹಾಗೆಯೇ ರಾಜ್ಯದ ಮತದಾರರು ಸಮ್ಮಿಶ್ರ ಸರ್ಕಾರಗಳ ರಚನೆಗೆ ಅವಕಾಶ ನೀಡುವ ರೀತಿಯಲ್ಲಿ ಮತ ಹಾಕದೇ ಒಂದೇ ಪಕ್ಷಕ್ಕೆ ಅಧಿಕಾರ ನೀಡುವ ಕಾರ್ಯ ಮಾಡಬೇಕು.
ಟಿ ಹನುಮನಗೌಡ ಬೆಳಗುರ್ಕಿ, ರೈತ ಮುಖಂಡರು, ಸಿಂಧನೂರು.
ಪ್ರಾಮಾಣಿಕರಿಗೆ...
ಚುನಾವಣೆ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ. ಈ ನಿಟ್ಟಿನಲ್ಲಿ ಪ್ರಾಮಾಣಿಕರಿಗೆ ಕಣಕ್ಕಿಳಿಯಲು ಎಲ್ಲ ಪಕ್ಷಗಳು ಅವಕಾಶ ಕಲ್ಪಿಸಬೇಕು. ಮುಕ್ತ ಮತ್ತು ಪಾರದರ್ಶಕತೆ ಅವಶ್ಯಕ. ಸ್ಥಳೀಯರಿಗೆ ಸ್ಪರ್ಧೆಗೆ ಅವಕಾಶ ನೀಡುವುದರಿಂದ ಆಯಾ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದನೆ ದೊರೆಯುವ ಸಾಧ್ಯತೆ ಹೆಚ್ಚು. ಇನ್ನು ಜಾತಿ, ಧರ್ಮ, ಮತ ಪಂಥಗಳ ಆಧಾರದಲ್ಲಿ ಮತ ಸೆಳೆಯುವ ಪ್ರಯತ್ನ ಮಾಡುವುದು ಅಪರಾಧ. ಅಂಥ ಕಾರ್ಯಕ್ಕೆ ಯಾರೂ ಅವಕಾಶ ನೀಡಬಾರದು. ಸರ್ವಜಾತಿ ಜನಾಂಗದ ಹಿತ ಕಾಯುವವರ ಅವಶ್ಯಕತೆಯಿದೆ. ಹಾಗೆಯೇ ಕಡ್ಡಾಯ ಮತ್ತು ಪೂರ್ಣ ಪ್ರಮಾಣದ ಮತದಾನದ ಮೂಲಕ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವ ಕಾರ್ಯವಾಗಬೇಕು. ಆಗ ಮಾತ್ರ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳಾಗಲು ಸಾಧ್ಯ.
ಟಿ ಅಯ್ಯಪ್ಪ ತುಕ್ಕಾಯಿ, ನಿಕಟಪೂರ್ವ ಕಸಾಪ ಜಿಲ್ಲಾಧ್ಯಕ್ಷರು, ರಾಯಚೂರು.
ಮೇಟಿ ಪ್ರಚಾರ
ಲಿಂಗಸ್ಗೂರು: ವಿಧಾನಸಭೆ ಚುನಾವಣೆ ಪ್ರಯುಕ್ತ ಲಿಂಗಸ್ಗೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್. ಹೂಲಗೇರಿ ಪರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ಗುರುವಾರ ಪ್ರಚಾರ ನಡೆಸಿದರು. ಕ್ಷೇತ್ರ ವ್ಯಾಪ್ತಿಯ ಗುರುಗುಂಟ, ಪೈದೊಡ್ಡಿ, ಯರಜಂತಿ, ಬಂಡೇಭಾವಿ, ಐದಬಾವಿ, ರಾಮಲೂಟಿ ಸೇರಿದಂತೆ ಇನ್ನಿತರೆ ಹಳ್ಳಿಗಳಲ್ಲಿ ಸಂಚರಿಸಿ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದರು. ಭೂಪನಗೌಡ ಕರಡಕಲ್, ನರಸಿಂಹ ನಾಯಕ, ಚೆನ್ನಾರೆಡ್ಡಿ ಬಿರಾದಾರ, ಶಿವಪ್ಪ ಮಾಚನೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement