'ಶ್ರೀ ಅಮರೇಶ್ವರ ಮಹಾತ್ಮೆ'ಗೆ ಚಾಲನೆ
ಲಿಂಗಸ್ಗೂರು: ಲಿಂಗಸ್ಗೂರು ತಾಲೂಕಿನ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಗುರುಗುಂಟಾ ಶ್ರೀ ಅಮರೇಶ್ವರ ದೇವರ ಚರಿತ್ರೆ ಆಧಾರಿತ ಭಕ್ತಿ ಪ್ರಧಾನ ಚಲನಚಿತ್ರ ಪ್ರದರ್ಶನಕ್ಕೆ ಅಮರೇಶ್ವರ ಅಭಿನವ ಗುರು ಗಜದಂಡ ಸ್ವಾಮಿಗಳು ಚಾಲನೆ ನೀಡಿದರು.
ಪಟ್ಟಣದ ಎಂಪೈರ್ ಸಿನಿಮಾ ಮಂದಿರದ ಮುಂಭಾಗದಲ್ಲಿ ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿದ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಶ್ರೀಗಳು ಚಲನೆ ನೀಡಿದರು. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದ ಅಮರೇಶ್ವರ ದೇವರ ಪವಾಡಗಳನ್ನಾಧರಿಸಿ ದಾಕ್ಷಾಯಿಣಿ ಮೂವೀಸ್ರವರ ಮಲ್ಲಯ್ಯಸ್ವಾಮಿ ಅರ್ಪಿತ ಶ್ರೀ ಅಮರೇಶ್ವರ ಮಹಾತ್ಮೆ ಎಂಬ ಭಕ್ತಿ ಪ್ರಧಾನ ಚಲನಚಿತ್ರ ಇದಾಗಿದೆ.
ಇತ್ತೀಚೆಗೆ ತೆರೆಕಂಡ ಚಲನಚಿತ್ರದ ತಾರಾಗಣದಲ್ಲಿ ಖ್ಯಾತ ಚಿತ್ರನಟ ಅಭಿಜಿತ್ ಅಮರೇಶ್ವರರ ತಂದೆ ಆದಯ್ಯನ ಪಾತ್ರ ನಿರ್ವಹಿಸಿದ್ದು, ಹೊಸ ತಾರೆ ಉಜ್ವಲಾ ಅವರು ತಾಯಿ ಮಾಳಗುಂಡಮ್ಮರ ಪಾತ್ರ ಮತ್ತು ಅಮರೇಶ್ವರ ಬಾಲಕನ ಪಾತ್ರವನ್ನು ಮಾಸ್ಟರ್ ಶ್ರೀನಿವಾಸ ನಿರ್ವಹಿಸಿದ್ದಾರೆ. ಮುಖ್ಯಪಾತ್ರದಲ್ಲಿ ಶಂಕರ ಪಾಟೀಲ್ ಕಾಣಿಸಿಕೊಂಡಿದ್ದಾರೆ.
ಚಿತ್ರಕಥೆ ಮತ್ತು ನಿರ್ದೇಶನ ಅರವಿಂದ ಮುಳಗುಂದ, ಪರಿಕಲ್ಪನೆ ನಿರ್ಮಾಪಕ ಬಸವರಾಜ ಹಿರೇಮಠ, ಕಾರ್ಯಕಾರಿ ನಿರ್ಮಾಪಕ ದೊಡ್ಡಬಸಪ್ಪ (ಶಿವಶಕ್ತಿ), ಛಾಯಾಗ್ರಹಣ ಮಹಾಬಳೇಶ, ಥ್ರಿಲ್ಲರ್ ಮಂಜು ಸಾಹಸ, ನೃತ್ಯ ಸಂಯೋಜನೆ ಮದನ್ ಹರಿಣಿ ಸೇರಿದಂತೆ ಇತರರು ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಇಂದಿನಿಂದ ಜಿಲ್ಲಾ ಲೋಕಾಯುಕ್ತರ ಪ್ರವಾಸ
ರಾಯಚೂರು: ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಏ. 27ರಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. ಏ. 27ರಂದು ಅವರು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ದೇವದುರ್ಗದ ಪ್ರವಾಸಿ ಮಂದಿರದಲ್ಲಿ ಮತ್ತು ಏ. 30ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಲಿಂಗಸ್ಗೂರು ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ದೂರು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ನೀಡಿ ದಾಖಲಿಸಬಹುದು. ಸ್ಥಳದಲ್ಲಿಯೇ ಪ್ರಪತ್ರಗಳನ್ನು ನೀಡಲಾಗುವುದು.