ಸಿಂಧನೂರಲ್ಲಿ ಅಂಚೆ ಮತ ಕೇಂದ್ರ ಸ್ಥಾಪನೆ
ರಾಯಚೂರು: ಸಿಂಧನೂರು ವಿಧಾನಸಭೆ ಕ್ಷೇತ್ರದ ಮತದಾನ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿಗೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅನುಕೂಲ ಕಲ್ಪಿಸಲಾಗಿದೆ. ಸಿಂಧನೂರಿನ ತಹಸೀಲ್ದಾರ್ ಕಚೇರಿಯಲ್ಲಿ ಮತದಾನ ಕೇಂದ್ರ ಸ್ಥಾಪಿಸಿದ್ದು, ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅರ್ಹರಾಗಿರುವ ಮತದಾರರು ಈ ಮತಗಟ್ಟೆಯ ಸೌಲಭ್ಯ ಪಡೆಯಲು ಚುನಾವಣೆ ವಿಭಾಗ ತಿಳಿಸಿದೆ.
ಮಸ್ಕಿಯಲ್ಲಿ ಸರ್ಕಾರಿ ನೌಕರರಿಗೆ ಮತಗಟ್ಟೆ ಸ್ಥಾಪಿಸಲು ಮನವಿ
ಲಿಂಗಸ್ಗೂರು: ವಿಧಾನಸಭೆ ಚುನಾವಣೆ ಪ್ರಯುಕ್ತ ಮಸ್ಕಿಯಲ್ಲಿ ಸರಕಾರಿ ನೌಕರರಿಗಾಗಿ ಮತಗಟ್ಟೆ ಸ್ಥಾಪಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೀಮಪ್ಪ ನಾಯಕ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಯೋಗಪ್ಪ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮಸ್ಕಿ ವಿಧಾನಸಭೆ ಕ್ಷೇತ್ರವು ಮಾನವಿ, ಸಿಂಧನೂರು, ಲಿಂಗಸ್ಗೂರು ತಾಲೂಕುಗಳ ಹಳ್ಳಿಗಳನ್ನು ಒಳಗೊಂಡಿದೆ. ಈ ಮೂರು ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುವ ಸರಕಾರಿ ನೌಕರರು ದೂರದ ಗ್ರಾಮಗಳಿಂದ ಆಗಮಿಸಿ ಲಿಂಗಸ್ಗೂರಲ್ಲಿ ಮತ ಚಲಾಯಿಸಲು ತುಂಬಾ ತೊಂದರೆ ಅನುಭವಿಸುವಂತಾಗುತ್ತದೆ. ಕಾರಣ ಸರ್ಕಾರಿ ನೌಕರರಿಗೆ ಕೇಂದ್ರ ಸ್ಥಳವಾದ ಮಸ್ಕಿಯಲ್ಲಿ ಒಂದು ಮತಗಟ್ಟೆ ಕೇಂದ್ರ ಪ್ರಾರಂಭಿಸಿ ನೌಕರರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.