ಹಾಸ್ಟೆಲ್ ಸ್ವಂತ ಕಟ್ಟಡಕ್ಕೆ ಒತ್ತಾಯಿಸಿ ಧರಣಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಏ.26
ಹಾಸ್ಟೆಲ್‌ಗೆ ಸ್ವಂತ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ಇಲ್ಲಿನ ಭಾಗ್ಯವಂತಿ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿನ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ನಿಲಯದ ವಿದ್ಯಾರ್ಥಿನಿಯರು ಗುರುವಾರ ಧರಣಿ ನಡೆಸಿದರು.
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್ ಅಧಿಕಾರಿಗಳು ಬೇರೆ ಸ್ಥಳದಲ್ಲಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ. ಸದ್ಯದ ಕಟ್ಟಡವನ್ನು ಖಾಲಿ ಮಾಡುವಂತೆ ಶನಿವಾರ ವಿದ್ಯಾರ್ಥಿನಿಯರಿಗೆ ಸೂಚಿಸಿದ್ದರು. ಆದರೆ, ವಿದ್ಯಾರ್ಥಿನಿಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಾಡಿಗೆ ಕಟ್ಟಡದ ವಾಯಿದೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಜಾಗ ಖಾಲಿ ಮಾಡುವಂತೆ ಕಟ್ಟಡದ ಮಾಲೀಕರು ಅಧಿಕಾರಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ.
ಒಟ್ಟು 100 ವಿದ್ಯಾರ್ಥಿನಿಯರಿಗೆ ಸದ್ಯದ ಬಾಡಿಗೆ ಕಟ್ಟಡ ಸರಿಯಾಗಿದೆ. ಹೊಸದಾಗಿ ಆಯ್ಕೆ ಮಾಡಿದ ಬಾಡಿಗೆ ಕಟ್ಟಡವು ತುಂಬಾ ಚಿಕ್ಕದಾಗಿದ್ದು, ಶೌಚಾಲಯ, ನೀರಿನ ಸಮಸ್ಯೆ ತುಂಬಾ ಇದೆ. ಅದರಲ್ಲೆ ಕುರಿಗಳ ರೀತಿಯಲ್ಲಿ ತುಂಬುವ ಯೋಜನೆಯನ್ನು ಹಾಸ್ಟೆಲ್ ವಾರ್ಡನ್ ಹಾಗೂ ಅಧಿಕಾರಿಗಳು ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.
ಪ್ಯಾರಾ ಮೆಡಿಕಲ್, ಬಿ.ಇಡಿ, ಡಿಪ್ಲೊಮಾ, ಎಂಜಿನಿಯರಿಂಗ್ ಕಲಿಯುತ್ತಿರುವ 100 ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ಪ್ರವೇಶ ಪಡೆದಿದ್ದಾರೆ. ಸದ್ಯ ಪರೀಕ್ಷೆಗಳು ನಡೆಯುತ್ತಿವೆ. ಸಮರ್ಪಕ ಕಟ್ಟಡ ಬಾಡಿಗೆ ತೋರಿಸುವ ತನಕ ಇಲ್ಲಿಂದ ಕದಲುವುದಿಲ್ಲ. ಬ್ರೆಡ್ ತಿಂದುಕೊಂಡು ಇಲ್ಲಿಯೇ ಮಲಗುತ್ತೇವೆ ಎನ್ನುವುದು ವಿದ್ಯಾರ್ಥಿನಿಯರ ಹಟವಾಗಿತ್ತು. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ತಿಳಿದು ಬಂದಿದೆ.