ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಂಗ್ರೆಸ್‌ಗೆ ಏಳೂ ಕ್ಷೇತ್ರಗಳಲ್ಲಿ ಗೆಲವು; ವಿಶ್ವಾಸ

Mainashree
Updated On : 28 Apr 2013, 11:34 am

ರಾಯಚೂರು: ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಿಲ್ಲೆಯ ಎಲ್ಲ 7 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲವು ಪಡೆಯಲಿದೆ. ಜಿಲ್ಲಾದ್ಯಂತ ಕಾಂಗ್ರೆಸ್ ಪರ ಅಲೆಯಿದ್ದು, ಇದರಿಂದ ಬೆಚ್ಚಿಬಿದ್ದಿರುವ ಬಿಜೆಪಿ ನಾಯಕರು ಪಕ್ಷದ ಕೇಂದ್ರ ನಾಯಕರ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಎಲ್ಲ ನಾಯಕರು ಒಗ್ಗಟ್ಟಿನಿಂದಿರುವುದು ಮತ್ತು ಜಿಲ್ಲಾದ್ಯಂತ ಕಾಂಗ್ರೆಸ್ ಪರವಾದ ಅಲೆಯಿದ್ದು, ಇದರಿಂದ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಪೂರ್ಣ ಒಲವು: ರಾಜ್ಯದಲ್ಲಿ ಇದುವರೆಗೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ಹಗರಣಗಳಿಂದ ಮತದಾರರು ಬೇಸತ್ತಿರುವುದು ಅನೇಕ ಸಮೀಕ್ಷೆಗಳಿಂದ ಬಯಲಾಗಿದೆ. ಕಾಂಗ್ರೆಸ್ ಪಕ್ಷದತ್ತ ಮತದಾರರ ಸಂಪೂರ್ಣ ಒಲವು ಇರುವುದು ಸಾಬೀತಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವ್ಯಕ್ತವಾಗುತ್ತಿರುವ ಬೆಂಬಲದಿಂದ ಬಿಜೆಪಿ ನಾಯಕರು ಬೆಚ್ಚಿಬಿದ್ದಿದ್ದಾರೆ. ಬಿಜೆಪಿ ನಾಯಕರಾದ ಅನಂತಕುಮಾರ್ ಮತ್ತು ರಘುನಾಥ ಮಲ್ಕಾಪುರೆ ಅವರು ಸೋಲಿನ ಭೀತಿಯಿಂದಲೇ ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಈ ನಾಯಕರು ವರ್ತನೆ ಸರಿಪಡಿಸಿಕೊಳ್ಳಲಿ ಎಂದು ಸಲಹೆ ನೀಡಿದರು.
ನಿರಂತರ ಪ್ರಯತ್ನದ ಯಶಸ್ಸು: ಕಳೆದ 30ವರ್ಷಗಳಿಂದ 371 ನೇ ಕಲಂ ಜಾರಿ ಮೂಲಕ ಹೈ.ಕ. ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿಕೆಗೆ ಬೇಡಿಕೆಯಿತ್ತು. ಅನೇಕ ಸಂಘ ಸಂಸ್ಥೆಗಳು ಹೋರಾಟವನ್ನೂ ನಡೆಸಿದ್ದವು. ಆದರೆ ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹೈ.ಕ. ಭಾಗಕ್ಕೆ ವಿಶೇಷ ಸ್ಥಾನಮಾನ ಮಂಜೂರು ಮಾಡಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡಿ ಯಶಸ್ಸು ಕಂಡಿದ್ದಾರೆಂದು ಹೇಳಿದರು.
ಹೈ.ಕ.ಭಾಗಕ್ಕೆ ಸದ್ಯ ದೊರೆತಿರುವ ವಿಶೇಷ ಸ್ಥಾನಮಾಕ್ಕೆ ಕಾಂಗ್ರೆಸ್‌ನ ಪ್ರಯತ್ನವೇ ಎಂಬುದು ಸ್ಪಷ್ಟ.
ಬಿಜೆಪಿ ನಾಯಕ ಅನಂತಕುಮಾರ್ ಅವರು ಎಂದೂ ಸಂಸತ್ ಕಲಾಪದಲ್ಲಿ 371ನೇ ಕಲಂ ಜಾರಿಗೆ ಒತ್ತಡ ಹೇರಲಿಲ್ಲ. ಕಾಂಗ್ರೆಸ್ ಪಕ್ಷ 371ನೇ ಕಲಂ (ಜೆ) ಜಾರಿಗೆ ಆಸಕ್ತಿ ತೋರಿದ್ದರಿಂದಲೇ ಸದ್ಯ ಅದರ ಜಾರಿ ಸಾಧ್ಯವಾಗಿದೆ. ಅದರಿಂದ ಹೈ.ಕ. ಭಾಗದಲ್ಲಿ ಕಾಂಗ್ರೆಸ್ ಪರ ಅಲೆ ಮೂಡಿದೆ. ಅದನ್ನು ಸಹಿಸದ ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆಂದು ಟೀಕಿಸಿದರು.
ಸೋಲು ಖಚಿತ: ಜಿಲ್ಲೆಯಲ್ಲಿ ಬಿಜೆಪಿ ಮತ್ತಿತರೆ ಪಕ್ಷಗಳಿಗೆ ಎಲ್ಲ ಕ್ಷೇತ್ರಗಳಲ್ಲಿ ಸೋಲಾಗಲಿದೆ. ಕಾಂಗ್ರೆಸ್ ಪಕ್ಷವು ಜಿಲ್ಲಾದ್ಯಂತ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿಯೂ ಅಧಿಕಾರ ಹಿಡಿಯುವುದರಲ್ಲಿ ಅನುಮಾನವಿಲ್ಲ ಎಂದ ಅವರು, ಪಕ್ಷದಲ್ಲಿ ಎಲ್ಲರೂ ಒಂದಾಗಿದ್ದು, ಭಿನ್ನಮತದ ಮಾತಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಅಲ್ಪ ಅಸಮಾಧಾನವಾಗಿದ್ದು ನಿಜ. ಟಿಕೆಟ್ ವಂಚಿತರು ಬೇಸರ ವ್ಯಕ್ತಪಡಿಸಿದ್ದು ತಮ್ಮ ಗಮನಕ್ಕೆ ಬಂದಿದ್ದು, ಈಗಾಗಲೇ ಅಂಥವರೊಂದಿಗೆ ಸಮಾಲೋಚನೆ ನಡೆಸಿದ್ದಾಗಿ ವಸಂತಕುಮಾರ್ ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್, ಮುಖಂಡರಾದ ಪಾಪಾರೆಡ್ಡಿ, ಪಾರಸಮಲ್ ಸುಖಾಣಿ, ಬಸವರಾಜರೆಡ್ಡಿ, ಶಿವಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement