ಸುಶಮೀಂದ್ರತೀರ್ಥರ ಮಹಾಸಮಾರಾಧನೆ
ರಾಯಚೂರು: ಮಂತ್ರಾಲಯದಲ್ಲಿ ಶನಿವಾರ ಪೂರ್ವಪೀಠಾಧಿಪತಿಗಳಾದ ಸುಶಮೀಂದ್ರತೀರ್ಥರ ಮಹಾ ಸಮಾರಾಧನೆಯ ಮಧ್ಯಾರಾಧನೆ ಸಂದರ್ಭ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶ್ರೀಮಠದಲ್ಲಿ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ರಾಘವೇಂದ್ರಸ್ವಾಮಿಗಳ ಮೂಲಬೃಂದಾವನ ಹಾಗೂ ಸುಶಮೀಂದ್ರತೀರ್ಥರ ಬೃಂದಾವನಕ್ಕೆ ವಿಶೇಷ ಪೂಜೆ, ಅಭಿಷೇಕವನ್ನು ಪೀಠಾಧಿಪತಿಗಳಾದ ಸುಯತೀಂದ್ರತೀರ್ಥರು ನೆರವೇರಿಸಿ ಮಹಾಮಂಗಳಾರತಿ ಮಾಡಿದರು.
ನಂತರ ಶ್ರೀಮಠದ ಪ್ರಾಕಾರದಲ್ಲಿ ಸುಶಮೀಂದ್ರತೀರ್ಥರ ಭಾವಚಿತ್ರವಿರಿಸಿ ರಥೋತ್ಸವ ನಡೆಸಲಾಯಿತು. ಈ ವೇಳೆ ಸುಯತೀಂದ್ರತೀರ್ಥರು, ಶ್ರೀಮಠದ ಸಿಬ್ಬಂದಿ ಹಾಗೂ ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಶ್ರೀಮಠದ ಪ್ರಮುಖರಾದ ಸುಯಮೀಂದ್ರಾಚಾರ್ಯ, ರಾಜಾಗೋಪಾಲಾಚಾರ್ಯ, ಶ್ರೀಪತಿ, ಆರ್.ಪ್ರಭಾಕರರಾವ್, ಮಾಧವಶೆಟ್ಟಿ ಸೇರಿದಂತೆ ಅನೇಕರಿದ್ದರು.