ಕಾಂಗ್ರೆಸ್ನಿಂದ ಮಾತ್ರ ಸಾಮಾಜಿಕ ನ್ಯಾಯ: ಸೈಯದ್ ಜಮೀರ್ ಪಾಷಾ
ಸಿಂಧನೂರು: ಐದು ವರ್ಷದಲ್ಲಿ ಆಪರೇಷನ್ ಕಮಲ, ಹಲವಾರು ಹಗರಣಗಳ ಮೂಲಕ ಬಿಜೆಪಿ ಸರ್ಕಾರ ರಾಜ್ಯದ ಮಾನ ಹರಾಜು ಮಾಡುವ ಮೂಲಕ ತಲೆ ತಗ್ಗಿಸುವಂತೆ ಮಾಡಿದೆ. ಅದಕ್ಕಾಗಿ ಈ ಬಾರಿ ಮತದಾರರು ಕಾಂಗ್ರೆಸ್ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಕಾಂಗ್ರೆಸ್ನಿಂದ ಮಾತ್ರ ಸಾಮಾಜಿಕ ನ್ಯಾಯ ಕಾಣಲು ಸಾಧ್ಯ ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ, ಮಾಜಿ ಐಎಎಸ್ ಅಧಿಕಾರಿ ಸೈಯದ್ ಜಮೀರ ಪಾಷಾ ಹೇಳಿದರು.
ಅವರು ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಐಟಿ, ಬಿಟಿ ಕ್ಷೇತ್ರವನ್ನು ಬೆಳವಣಿಗೆ ಮಾಡುವ ಮೂಲಕ ಯುವಕರಿಗೆ ಹೆಚ್ಚಿನ ಉದ್ಯೋಗ ಒದಗಿಸಿದ್ದರು ಎಂದರು.
ಮುಸ್ಲಿಂ, ಕ್ರೈಸ್ತ ಸಮುದಾಯದ 25 ಅಭ್ಯರ್ಥಿಗಳಿಗೆ ಟಿಕೇಟ್ ನೀಡಲಾಗಿದೆ. ಈಗಾಗಲೇ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು ಜಿಲ್ಲಾ ಪ್ರವಾಸ ಮಾಡಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೈ-ಕ ಅಭಿವೃದ್ಧಿಗೆ ಸಂವಿಧಾನದ 371ನೇ ಕಲಂ ಗೆ ತಿದ್ದಪಡಿ ಮಾಡಿರುವುದು ಸುಲಭದ ಕೆಲಸವಲ್ಲ. ಇದರಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಅವರ ಕೊಡುಗೆ ಅಪಾರವಾಗಿದೆ. ಇದಕ್ಕಾಗಿ ಟೀಕೆ ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಸದಸ್ಯರಾದ ಮುಮ್ತಾಜ್ ಅಲಿ, ಜೆ. ಶಫಿಯುಲ್ಲಾ, ಅಸ್ಲಾಂ ಖಾನ್, ಜಿಪಂ ಸದಸ್ಯ ಚಂದೂಸಾಬ್ ಮಳ್ಳೂರು, ಯುವ ಘಟಕದ ಅಧ್ಯಕ್ಷ ಮುರ್ತುಜಾ ಸಾಬ್ ಮತ್ತಿತರರು ಇದ್ದರು.