ಚುನಾವಣಾಧಿಕಾರಿ ದಾಳಿ ತೋರಿಕೆಗೆ ಮಾತ್ರ
ದೇವದುರ್ಗ: ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರ ಸಂಬಂಧಿ ಮನೆ ಮೇಲೆ ಅಧಿಕಾರಿಗಳ ತಂಡ ಮಾಡಿದ ದಾಳಿ ತೋರಿಕೆಗೆ ಮಾತ್ರ. ತಹಸೀಲ್ದಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಾಕಷ್ಟು ಮುಂಚಿತವಾಗಿಯೇ ಶಿವನಗೌಡ ನಾಯಕರಿಗೆ ಮಾಹಿತಿ ನೀಡಿ ಮಾಡಿದ ದಾಳಿಯಿದಾಗಿದೆ ಎಂದು ಕೆಜೆಪಿ ಅಭ್ಯರ್ಥಿ ಶಾಂತಗೌಡ ಚನ್ನಪಟ್ಟಣ ಆರೋಪಿಸಿದರು.
ಪಟ್ಟಣದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಹಸೀಲ್ದಾರ್ ಬಸಲಿಂಗಪ್ಪ ನಾಯಿಕೊಡೆ ಮತ್ತು ಶಿರಸ್ತೇದಾರ ಹುಸೇನಪ್ಪ ಅವರು ದಾಳಿಯ ಬಗ್ಗೆ ಶಾಸಕ ಶಿವನಗೌಡ ನಾಯಕರಿಗೆ ಮೊದಲೇ ಮಾಹಿತಿ ನೀಡಿ ಮನೆಯಲ್ಲಿದ್ದ ಹಣ ಮತ್ತು ಬಂಗಾರದ ಒಡವೆಗಳನ್ನು ಬೇರೆಡೆಗೆ ಸಾಗಿಸುವಂತೆ ಅನುಕೂಲ ಕಲ್ಪಿಸಿದ್ದಾರೆಂದು ಟೀಕಿಸಿದರು.
ಅಧಿಕಾರಿಗಳಿಂದ ಶಾಸಕರಿಗೆ ಮಾಹಿತಿ: ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಕೆ. ಶಿವನಗೌಡ ನಾಯಕರು ತಾಲೂಕಿನ ಮತದಾರರಿಗೆ ಅದರಲ್ಲೂ ವಿಶೇಷವಾಗಿ ಮಹಿಳಾ ಮತದಾರರಿಗೆ 30 ಸಾವಿರ ಮೌಲ್ಯದ ಬೆಂಡೋಲೆ ಹಂಚಿಕೆ ಮಾಡಲು ಯೋಜಿಸಿದ್ದರು. ಬಿಜಾಪುರದಿಂದ ಈ ಚಿನ್ನಾಭರಣ ಖರೀದಿಸಲಾಗಿದೆ. ಪ್ರತಿ ದಿನ ಅರಕೇರಾದಲ್ಲಿರುವ ಶಿವನಗೌಡರ ಸಂಬಂಧಿ ವೆಂಕಟೇಶ ಪೂಜಾರಿ ಮತ್ತು ಶಾಸಕರ ಮನೆಯಲ್ಲಿ ಅಕ್ರಮವಾಗಿ ಹಣ ಹಾಗೂ ಮದ್ಯ ಹಂಚಲಾಗುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ 15 ದೂರುಗಳನ್ನು ಆಡಳಿತಕ್ಕೆ ನೀಡಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲೂಕಿನ ಪೊಲೀಸ್ ಇಲಾಖೆಯ ಅಧಿಕಾರಿಗಳು ದೂರುಗಳಿಗೆ ಸ್ಪಂದಿಸಲಿಲ್ಲ. ಹೋಬಳಿ ಮಟ್ಟದಲ್ಲಿನ ಫ್ಲೈಯಿಂಗ್ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ನ್ಯಾಯ ಸಮ್ಮತ ಚುನಾವಣೆ ಅಸಾಧ್ಯ: ತಹಸೀಲ್ದಾರ್ ಮತ್ತು ಕಂದಾಯ ಇಲಾಖೆಯ ಶಿರಸ್ತೇದಾರರು ಸೇರಿ ಕೆಲ ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ತಾಲೂಕಿನಲ್ಲಿ ಅಕ್ರಮ ಹಣ ಮತ್ತು ಮದ್ಯ ಹಂಚುವ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳ ಆದೇಶದಂತೆ ನಿಷ್ಪಕ್ಷಪಾತವಾಗಿ ದಾಳಿ ಮಾಡದ ಸ್ಥಳೀಯ ಅಧಿಕಾರಿಗಳು ಶಾಸಕರಿಗೆ ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಆರೋಪಿಸಿದರು.
ಮಿನಿ ವಿಧಾನಸೌಧದಲ್ಲಿ ಚುನಾವಣಾಧಿಕಾರಿಗಳು ಕೈಗೊಳ್ಳುವ ಎಲ್ಲ ನಿರ್ಧಾರಗಳ ಮಾಹಿತಿಯನ್ನು ಬಿಜೆಪಿ ಅಭ್ಯರ್ಥಿಗೆ ರವಾನಿಸುವ ಕಾರ್ಯ ತಹಸೀಲ್ದಾರ್ ಮಾಡುತ್ತಿದ್ದಾರೆ. ಇದರಿಂದಾಗಿ ಪಾರದರ್ಶಕ ಹಾಗೂ ಮುಕ್ತ, ನ್ಯಾಯಸಮ್ಮತ ಚುನಾವಣೆ ಅಸಾಧ್ಯ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಈ ವೇಳೆ ಕೆಜೆಪಿ ತಾಲೂಕು ಅಧ್ಯಕ್ಷ ಭೀಮಸೇನರಾವ್ ಕಂಬದಾಳ, ಮಲ್ಲಿಕಾರ್ಜುನ ಗೋಪಾಳಪುರ, ಶಾಂತಯ್ಯ ಸ್ವಾಮಿ, ಅಮರೇಶ ಪಾಟೇಲ ಚಾಗಭಾವಿ ಸೇರಿ ಅನೇಕರಿದ್ದರು.
ಶಾಸಕರ ಸಂಬಂಧಿ ಮನೆ ತಪಾಸಣೆ
ದೇವದುರ್ಗ: ತಾಲೂಕಿನ ಅರಕೇರಾ ಗ್ರಾಮದಲ್ಲಿರುವ ಶಾಸಕ ಶಿವನಗೌಡ ನಾಯಕ ಅವರ ಸಂಬಂಧಿಯೊಬ್ಬರ ಮನೆಯನ್ನು ಭಾನುವಾರ ಬೆಳಗಿನ ಜಾವ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ತಪಾಸಣೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಶಾಸಕ ಕೆ. ಶಿವನಗೌಡ ನಾಯಕರ ಸಂಬಂಧಿ ವೆಂಕಟೇಶ ಪೂಜಾರಿ ಅವರ ಮನೆಗೆ ತೆರಳಿದ ಇಬ್ಬರು ಅರಣ್ಯಾಧಿಕಾರಿಗಳು, ಸಿಪಿಐ ಗಿರೇಶ ಬೋಜಣ್ಣವರ್ ಮತ್ತಿತರರಿದ್ದ ತಪಾಸಣೆ ತಂಡದ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ದಾಳಿ ನಡೆಸಿ ತಪಾಸಣೆ ಮಾಡಿದ್ದಾರೆಂದು ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ ತಿಳಿಸಿದ್ದಾರೆ.