ನೀರಿಗಾಗಿ ಆಗ್ರಹಿಸಿ ನಗರಸಭೆಗೆ ದೌಡು
ಸಿಂಧನೂರು: ಕಳೆದ ಏಳು ದಿನದಿಂದ ತಮಗೆ ಕುಡಿಯುವ ನೀರು ಬಾರದಿರುವುದಕ್ಕೆ ಬೇಸತ್ತ ನಗರದ ಜನತಾಕಾಲೋನಿ ನಿವಾಸಿಗಳು ನಗರಸಭೆಗೆ ದೌಡಾಯಿಸಿ ಪ್ರತಿಭಟಿಸಿದರು. ತಕ್ಷಣ ನೀರು ಬಿಡಬೇಕು. ಇಲ್ಲದಿದ್ದರೆ ಇಲ್ಲಿಯೇ ಕುಳಿತುಕೊಳ್ಳುತ್ತೇವೆಂದು ಅಲ್ಲಿಯ ನಿವಾಸಿಗಳು ಪಟ್ಟು ಹಿಡಿದರು. ನಗರಸಭೆ ಸದಸ್ಯರಾದ ಪ್ರಭುರಾಜ, ಜಾಫರ್ ಜಾಹಗೀರದಾರ, ಮಲ್ಲಿಕಾರ್ಜುನ ಪಾಟೀಲ ಮತ್ತಿತರರು ಸ್ಥಳಕ್ಕೆ ಆಗಮಿಸಿ ನಗರಸಭೆ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸ್ಥಳಕ್ಕೆ ಕರೆಯಿಸಿದರು. ನಗರಸಭೆ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಂಗಾಧರ ಒಂದು ತಾಸಿನಲ್ಲಿ ನೀರು ಪೂರೈಕೆ ಮಾಡುವುದಾಗಿ ಹೇಳಿದ ನಂತರವೇ ಜನತಾ ಕಾಲೋನಿ ನಾಗರಿಕರು ಮನೆಗೆ ತೆರಳಿದರು.
ಡಾ. ಮಾನ್ವಿಕರ್ ನಿಧನಕ್ಕೆ ಸಂತಾಪ
ರಾಯಚೂರು: ನಗರದ ಚರ್ಮರೋಗ ತಜ್ಞ ಡಾ. ಎಸ್.ಬಿ. ಮಾನ್ವಿಕರ್ ಅವರ ನಿಧನಕ್ಕೆ ದಾಸ ಸಾಹಿತ್ಯ ಅಧ್ಯಯನ ಕೇಂದ್ರ ತೀವ್ರ ಶೋಕ ವ್ಯಕ್ತಪಡಿಸಿದೆ. ಇತ್ತೀಚೆಗೆ ಸಂತಾಪ ಸಭೆ ನಡೆಸಿದ ಕೇಂದ್ರದ ಪ್ರಮುಖರಾದ ಬಿ. ನರಸಿಂಗರಾವ್ ಮತ್ತಿತರರು, ವೃತ್ತಿಯಲ್ಲಿ ವೈದ್ಯರಾಗಿದ್ದರೂ ಡಾ. ಮಾನ್ವಿಕರ್ ಅವರು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಒಲವು ಹೊಂದಿದ್ದು, ಉಚಿತ ಚಿಕಿತ್ಸೆ ಶಿಬಿರಗಳ ಮೂಲಕ ಸಮಾಜ ಸೇವೆ ನಡೆಸಿದ್ದರು ಎಂದು ಹೇಳಿದರು. ಸಂತಾಪ ಸಭೆಯಲ್ಲಿ ಡಾ. ಶೀಲಾದಾಸ್, ಪ್ರಾಣೇಶ್ ಮುತಾಲಿಕ್, ಟಿ.ಆರ್. ರಾವ್, ಡಾ. ಜಯಲಕ್ಷ್ನಿ ಮಂಗಳಮೂರ್ತಿ, ರಾಜಶ್ರೀ ಕಲ್ಲೂರಕರ್, ವೇಣುಗೋಪಾಲ್ ವರಪ್ ಇದ್ದರು. ಡಾ. ಎಸ್.ಬಿ. ಮಾನ್ವಿಕರ್ ಅವರ ನಿಧನಕ್ಕೆ ಎಐಡಿಎಸ್‌ಒ ಸೇರಿ ವಿವಿಧ ಸಂಘಟನೆಗಳು ತೀವ್ರ ಶೋಕ ವ್ಯಕ್ತಪಡಿಸಿವೆ.