ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯದ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ, ಮುದಗಲ್, ಎ. 27
ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ರಾಜ್ಯಗಳ ಸಮಸ್ಯೆಗಳು ತಿಳಿಯುವುದಿಲ್ಲ. ರಾಜ್ಯ ಮಟ್ಟದ ನಾಯಕರು ಹೇಳಿದ್ದು, ಬರೆದು ಕೊಟ್ಟದ್ದನ್ನೇ ಕೇಳಿ ಮಾತನಾಡುವುದಷ್ಟೇ ರೂಢಿ. ಆಡಳಿತ ನಡೆಸುವುದನ್ನು ಬಿಟ್ಟರೇ ರಾಜ್ಯದ ಸಮಸ್ಯೆ ತಿಳಿಯದೇ ಇರುವುದು ಅಭಿವೃದ್ಧಿಗೆ ಕುಂಠಿತವಾಗಲಿದೆ. ರಾಜ್ಯದಲ್ಲಿಯ ಪ್ರಾದೇಶಿಕ ಪಕ್ಷವಾದ ಬಿಎಸ್ವೈ ನೇತೃತ್ವ ಕೆಜೆಪಿಯಿಂದ ಮಾತ್ರ ರಾಜ್ಯ ಅಭಿವೃದ್ಧಿ ಸಾಧ್ಯ ಎಂದು ಹಾಲುಮತ ಸಮಾಜದ ರಾಜ್ಯ ಮುಖಂಡ ಮುಕುಡಪ್ಪ ಹೇಳಿದರು.
ಹಾಸ್ಯಾಸ್ಪದ ಹೇಳಿಕೆ: ಅವರು ಬಹಿರಂಗ ಸಭೆಯಲ್ಲಿ ಲಿಂಗಸ್ಗೂರು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಚ್.ಬಿ. ಮುರಾರಿ ಪರ ಮತಯಾಚಿಸಿ, ರಾಜ್ಯದಲ್ಲಿ ಬಿಜೆಪಿಯವರು ಕೆಜೆಪಿ ಪ್ರಣಾಳಿಕೆಯನ್ನು ನಕಲು ಮಾಡಿ ಅಭಿವೃದ್ಧಿಯನ್ನು ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಭಾಗ್ಯಲಕ್ಷ್ಮೀ ಯೋಜನೆ, ಹೆರಿಗೆ ಕಿಟ್, ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ, ನೇಕಾರರ ಸಾಲ ಮನ್ನಾ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ನಾವು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದರು.
ಕಪ್ಪು ಹಣ: ಈಗ ಜೆಡಿಎಸ್ ಸೇರಿ ಪಕ್ಷದ ಅಭ್ಯರ್ಥಿಯಾಗಿರುವ ಮಾನಪ್ಪ ವಜ್ಜಲ್ರವರು ತಾವು ಅಭಿವೃದ್ಧಿಯಾಗುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ ಎನ್ನುತ್ತ ಚುನಾವಣೆಯಲ್ಲಿ ಮತ ಯಾಚಿಸುತ್ತಿರುವುದು ಹಾಸ್ಯಾಸ್ಪದ. ಬಿಎಸ್ವೈ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಜೆಡಿಎಸ್ನ ಕುತಂತ್ರದಲ್ಲಿ ಬಿಜೆಪಿ ಶಾಸಕನಾಗಿದ್ದ ಮಾನಪ್ಪ ವಜ್ಜಲರವರ ಪಾತ್ರವೂ ಇದೆ. ಅಲ್ಲದೇ ಗಣಿ ಧಣಿಗಳಿಂದ ಕಪ್ಪು ಹಣ ಪಡೆದು ಸರ್ಕಾರ ಉರುಳಿಸಲು ಪ್ರಯತ್ನ ಮಾಡಿದ್ದಾರೆ. ಇಂತಹ ಭ್ರಷ್ಟರನ್ನು ಜನರು ತಿರಸ್ಕರಿಸಬೇಕು ಎಂದರು.
ಕೆಜೆಪಿ ಅಭ್ಯರ್ಥಿ ಎಚ್.ಬಿ. ಮುರಾರಿ ಮಾತನಾಡಿ ಬಹಿರಂಗ ಮತ ಯಾಚಿಸಿದರು. ಈ ಸಮಯದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಹನುಮಂತಪ್ಪ ತೊಗರಿ, ತಾ.ಪಂ. ಮಾಜಿ ಅಧ್ಯಕ್ಷ ದೊಡ್ಡಬಸಪ್ಪ ಅಂಗಡಿ ಇದ್ದರು.