ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಂಗ್ರೆಸ್‌ನಿಂದ ಮಾತ್ರ ಸ್ಥಿರ ಸರ್ಕಾರ ಸಾಧ್ಯ

Vishwanath S
Updated On : 1 May 2013, 12:16 pm

ಕನ್ನಡಪ್ರಭ ವಾರ್ತೆ, ರಾಯಚೂರು, ಏ.30
ರಾಜ್ಯದಲ್ಲಿ ಸ್ಥಿರ ಹಾಗೂ ಸುಭದ್ರ ಸರ್ಕಾರ, ಉತ್ತಮ ಆಡಳಿತ ನೀಡಿಕೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂಬುದನ್ನು ಮತದಾರರು ಮನಗಂಡಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಪಕ್ಷದ ಗೆಲುವು ಖಚಿತ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಬೋಸರಾಜು ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಸಿಎಂ ಕುರ್ಚಿಗಾಗಿನ ಕಿತ್ತಾಟದಲ್ಲಿ ಜನತೆಗೆ ಉತ್ತಮ ಆಡಳಿತ ನೀಡುವಲ್ಲಿ ಬಿಜೆಪಿ ವಿಫಲವಾಗಿದ್ದು, ಕಾಂಗ್ರೆಸ್ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ ಎಂಬುದು ಸಾಬೀತಾಗಿದೆ ಎಂದು ಹೇಳಿದರು.
ಸಂಪನ್ಮೂಲ ಲಭ್ಯತೆ ಆಧರಿಸಿ ಪ್ರಣಾಳಿಕೆ: ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಈಡೇರಿಸಲು ಸಾಧ್ಯವಿರುವಂಥ ಆಶ್ವಾಸನೆಗಳನ್ನು ಮಾತ್ರ ಸೇರಿಸಲಾಗಿದೆ. ಹಿರಿಯ ರಾಜಕೀಯ ವ್ಯಕ್ತಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ರಚಿಸಿದ್ದ ತಂಡದ ಶಿಫಾರಸುಗಳನ್ನು ಆಧರಿಸಿ ಪ್ರಣಾಳಿಕೆ ತಯಾರಿಸಿದೆ. ರಾಜ್ಯದ ಸಂಪನ್ಮೂಲಗಳ ಲಭ್ಯತೆ ಮತ್ತು ಇತಿಮಿತಿಗಳನ್ನು ಅರಿತು ಪ್ರಣಾಳಿಕೆ ಸಿದ್ಧಗೊಳಿಸಲಾಗಿದೆ ಎಂದು ವಿವರಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರಿಗೆ ವಸತಿ ಯೋಜನೆಗಳ ಲಾಭ ಪೂರ್ಣ ಪ್ರಮಾಣದಲ್ಲಿ ದೊರೆಯಲಿಲ್ಲ ಎಂಬ ಅಳಲು ಮತದಾರರಲ್ಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಇಂಥ ಕೊರತೆ ನೀಗಿಸಲು ಪ್ರಯತ್ನಿಸಲಿದೆ. ಕುಡಿವ ನೀರಿನ ಸಮರ್ಪಕ ಒದಗಿಸುವಿಕೆ, ನಿರಂತರ ವಿದ್ಯುತ್ ಪಕ್ಷದ ಗುರಿಯಾಗಿದೆ ಎಂದರು.
ಬಿಜೆಪಿ ನಾಯಕರ ಅಡ್ಡಗಾಲು: ಬಿಜೆಪಿ ಸರ್ಕಾರ ರೈತರಿಗೆ 24 ಗಂಟೆ ವಿದ್ಯುತ್ ಒದಗಿಸುವ ಭರವಸೆ ಕೊಟ್ಟಿತ್ತು. ಆದರೆ ಈಡೇರಿಸದೇ ರೈತರಿಗೆ ವಂಚಿಸಿತು. ನಾರಾಯಣಪುರ ಬಲದಂಡೆಯ 9ಎ ಕಾಲುವೆಯ ವಿಸ್ತರಣೆ ಕಾರ್ಯಕ್ಕೆ ಬಿಜೆಪಿ ಪ್ರಮುಖ ನಾಯಕರೇ ಅಡ್ಡಗಾಲಾದರು ಎಂದು ಆರೋಪಿಸಿದರು.
ಜಲ ಸಂಪನ್ಮೂಲ ಸಚಿವ ಬೊಮ್ಮಾಯಿ ಹಾಗೂ ಮತ್ತಿತರರಿಗೆ ಇಲ್ಲಿನ ನೀರಾವರಿ ಯೋಜನೆಗಳ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಜಿಲ್ಲಾ ನಾಯಕರು ನಿರಂತರವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಚಿವರು ಈ ಭಾಗದ ಯೋಜನೆಗಳತ್ತ ಒಮ್ಮೆಯೂ ಆಸಕ್ತಿ ತೋರಲಿಲ್ಲ ಎಂದು ಟೀಕಿಸಿದರು.
ಬೊಮ್ಮಾಯಿ ನಿರ್ಲಕ್ಷ್ಯ: ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ಹೂಳು ತುಂಬಿದ್ದರೂ ಅದರ ತೆರವಿಗೆ ಆಸಕ್ತಿ ತೋರಲಿಲ್ಲ. ಚೆನ್ನೈ ಮೂಲದ ಸಂಸ್ಥೆಗೆ ಹೂಳು ತೆರವು ಕಾರ್ಯ ವಹಿಸಲಾಗುತ್ತದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳುತ್ತಲೇ ಕಾಲಹರಣ ಮಾಡಿದರು. ಆದರೆ ಆಸಕ್ತಿ ವಹಿಸಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಿಲ್ಲ ಎಂದು ಆರೋಪಿಸಿದರು.
ಹೂಳಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಪರ್ಯಾಯವಾಗಿ ಸಮಾನಾಂತರ ಜಲಾಶಯಗಳನ್ನು ನಿರ್ಮಿಸಬೇಕೆಂದು ಕಾಂಗ್ರೆಸ್ ಬೇಡಿಕೆಗೆ ಮನ್ನಣೆ ನೀಡದ ಬಿಜೆಪಿ ಸರ್ಕಾರದವರು ಈಗ ಚುನಾವಣೆಯ ಹಿನ್ನೆಲೆಯಲ್ಲಿ ಪುನಾ ನೀರಾವರಿ ಯೋಜನೆಗಳ ಜಾರಿಯ ಭರವಸೆ ನೀಡುತ್ತಿದ್ದಾರೆಂದು ಟೀಕಿಸಿದರು.
ಕೇಂದ್ರದ ವಿರುದ್ಧ ಅನಗತ್ಯ ಆರೋಪ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ವಿದ್ಯುತ್ ನೀಡಿಕೆಯಲ್ಲಿಯೂ ಸಮಾನತೆ ಕಾಪಾಡಲಾಗಿದೆ. ಆದರೆ ಬಿಜೆಪಿ ಸರ್ಕಾರದವರು ಕೇಂದ್ರದ ವಿರುದ್ಧ ಈ ವಿಚಾರದಲ್ಲಿ ಅನಗತ್ಯ ಆರೋಪ ಮಾಡುವುದರಲ್ಲಿಯೇ ಕಾಲಹರಣ ಮಾಡಿದರು ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವು ದೇಶದ ಎಲ್ಲ ರಾಜ್ಯಗಳಿಗೆ ಸಮಾನವಾಗಿ ಸವಲತ್ತುಗಳನ್ನು ಒದಗಿಸಬೇಕಾಗುತ್ತದೆ ಎಂಬ ವಿಚಾರ ಮರೆತ ಬಿಜೆಪಿ ನಾಯಕರು ಹಾಗೂ ಸಚಿವರು ವೃಥಾ ಕೇಂದ್ರದ ವಿರುದ್ಧ ಟೀಕೆ ಮಾಡಿದ್ದು ಸಮಂಜಸವಲ್ಲ. ಕಲ್ಲಿದ್ದಲು ಹಂಚಿಕೆಯಲ್ಲಿಯೂ ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ ಎಂದು ಹೇಳಿದರು. ಸದ್ಯ ಜಿಲ್ಲೆ ಸೇರಿ ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆಯಿದ್ದು, ಜಿಲ್ಲೆಯ ಎಲ್ಲ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು ರಾಜ್ಯದಲ್ಲಿಯೂ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ವಸಂತ ಕುಮಾರ್, ಮಾಜಿ ಶಾಸಕ ಪಾಪಾರೆಡ್ಡಿ, ಪಾರಸಮಲ್ ಸುಖಾಣಿ ಮತ್ತತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement