ಮನೆ ಕುಸಿತ: ಮಕ್ಕಳಿಗೆ ಗಾಯ
ಲಿಂಗಸ್ಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ 14ನೇ ವಾರ್ಡಿನ ಪಿಂಚಣಿಪುರದಲ್ಲಿ ವಸತಿ ಮನೆಯ ಛಾವಣಿಯ ಕಾಂಕ್ರಿಟ್ ಸಜ್ಜಾ ಕುಸಿತಗೊಂಡ ಪರಿಣಾಮ ಇಬ್ಬರು ಮಕ್ಕಳು ಗಾಯಗೊಂಡ ಘಟನೆ ಮಂಗಳವಾರ ಸಂಜೆ ಜರುಗಿದೆ.
ಪುರಸಭೆ ವತಿಯಿಂದ ನಮ್ಮ ಮನೆ ಯೋಜನೆಯಡಿ ಸುಮಾರು 8-10 ವರ್ಷಗಳ ಹಿಂದೆ ನಿರ್ಮಿಸಲಾದ ವಸತಿ ಮನೆ ಅಂಬಿಕಮ್ಮ ಎಂಬುವರಿಗೆ ಸೇರಿದ್ದು, ಅಂಬಿಕಮ್ಮಳ ಮಗ ಹುಸೇನಪ್ಪ ಎಂಬುವರು ಮನೆಯ ಮೇಲೆ ಕೆಲಸದ ನಿಮಿತ್ತ ಹತ್ತಿದ್ದಾರೆ. ಆಗ ಕಾಂಕ್ರಿಟ್ ಸಜ್ಜಾದ ಹತ್ತಿರ ಬಂದಾಗ ಕುಸಿತಗೊಂಡ ಪ್ರಯುಕ್ತ ಆತನೂ ಕೆಳಕ್ಕೆ ಬಿದ್ದಿದ್ದಾನೆ. ಇದೇ ಸಮಯದಲ್ಲಿ ಕೆಳಗೆ ಆಟವಾಡುತ್ತಿದ್ದ ಈತನ ಮಕ್ಕಳಾದ ಚನ್ನು(3) ಮತ್ತು ಮಲ್ಲು(5) ಎಂಬುವವರಿಗೆ ಇಟ್ಟಿಗೆ ಮತ್ತು ಸಿಮೆಂಟ್ ಕಾಂಕ್ರಿಟ್ ಬಡಿದು ಗಾಯಗೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.