ಆರ್ಸೆನಿಕ್ಯುಕ್ತ ನೀರು: ತಜ್ಞರ ವರದಿ ಸುತ್ತ ವಿವಾದ
ಜಗನ್ನಾಥ ಆರ್. ದೇಸಾಯಿ
ಕನ್ನಡಪ್ರಭ ವಾರ್ತೆ ರಾಯಚೂರು ಆ.1
ಜಿಲ್ಲೆಯಲ್ಲಿ ಆರ್ಸೆನಿಕ್ಯುಕ್ತ ನೀರಿನ ಸಮಸ್ಯೆ ಕುರಿತು ಡಾ. ಸುದರ್ಶನ್ ನೇತೃತ್ವದ ತಜ್ಞರು ಸರ್ಕಾರಕ್ಕೆ ಸಲ್ಲಿಸಿದ ವರದಿ ವಿವಾದಕ್ಕೆ ದಾರಿ ಮಾಡಿದೆ. ಆರ್ಸೆನಿಕ್ ಸಮಸ್ಯೆಗೆ ಹಟ್ಟಿ ಚಿನ್ನದ ಗಣಿ ಕಾರಣ ಎಂಬ ವರದಿಯಲ್ಲಿನ ಅಂಶಗಳು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಇಲ್ಲದಿರುವುದು ಚರ್ಚೆಗೆ ಗ್ರಾಸವೊದಗಿಸಿದೆ.
ಆರ್ಸೆನಿಕ್ಯುಕ್ತ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರೊದಗಿಸುವ ಸರ್ಕಾರದ ಉದ್ದೇಶದ ಹಿಂದಿನ ಹತ್ತಾರು ವಿಚಾರಗಳು ಸಂಶಯಕ್ಕೆ ಕಾರಣವಾಗಿವೆ. ಶುದ್ಧ ಕುಡಿಯುವ ನೀರೊದಗಿಸುವ ಭರವಸೆ ನೀಡಿದ್ದ ಆಡಳಿತವು ಸದ್ಯ ಲಭ್ಯವಿರುವ ನೀರಿನ ಬಳಕೆ ನಿಷೇಧಿಸಿದೆ. ಆದರೆ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರಿಗೆ ಮಾತ್ರ ಶುದ್ಧ ನೀರು ಈಗಲೂ ಮರೀಚಿಕೆಯೇ ಆಗಿದೆ.
ಮತ್ತೆ ಆರ್ಸೆನಿಕ್ಯುಕ್ತ ನೀರೇ ಗತಿ!: ಜಿಲ್ಲೆಯ 44 ಗ್ರಾಮಗಳಲ್ಲಿ ಆರ್ಸೆನಿಕ್ ಸಮಸ್ಯೆಯಿದ್ದರೆ, 111 ಗ್ರಾಮಗಳಲ್ಲಿ ಫ್ಲೋರೈಡ್ಯುಕ್ತ ನೀರು ದೊರೆಯುತ್ತಿದೆ. ಕಳೆದ ಜು. 1ರಿಂದಲೇ ಜಿಲ್ಲೆಯಲ್ಲಿ ಆರ್ಸೆನಿಕ್ಯುಕ್ತ ನೀರಿನ ಮೂಲಗಳಿಂದ ನೀರು ಬಳಸದಂತೆ ಗ್ರಾಮಸ್ಥರಿಗೆ ಸೂಚಿಸಿದ ಜಿಪಂ ಟ್ಯಾಂಕರ್ ಮೂಲಕ ಶುದ್ಧ ನೀರೊದಗಿಸುವ ಕಾರ್ಯವನ್ನು ಆರಂಭದಲ್ಲಿ ಮಾಡಿತು. ಆದರೆ ಕಳೆದ ಕೆಲ ದಿನಗಳಿಂದ ಟ್ಯಾಂಕರ್ ಕೊರತೆ, ಈಗಾಗಲೇ ಪೂರೈಸಿದ ನೀರಿಗೆ ಆಡಳಿತದಿಂದ ಹಣ ದೊರೆಯದ್ದರಿಂದ ಮತ್ತೆ ಆರ್ಸೆನಿಕ್ಯುಕ್ತ ನೀರೇ ಗತಿ ಎಂಬಂಥ ಸ್ಥಿತಿಯಿದೆ.
ನೀರು ಕೊಂಡುಕೊಳ್ಳಲಾಗದು: ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ಮುಂದಾಗಿರುವ ಜಿಪಂ ಅನೇಕ ಸಂಸ್ಥೆಗಳೊಂದಿಗೆ ಘಟಕಗಳ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಹಣ ಕೊಟ್ಟು ನೀರು ಖರೀದಿಸುವಂಥವರ ಪ್ರಮಾಣ ತೀರಾ ಕಡಿಮೆ. ಹಾಗಾಗಿ ಜನತೆ ಉಚಿತವಾಗಿ ನೀರು ಕೊಡುವುದಾದರೆ ಕೊಡಿ, ಇಲ್ಲದಿದ್ದರೆ ನಮಗೆ ಈ ನೀರು ಬೇಡ ಎಂದು ಈಗಾಗಲೇ ಎಚ್ಚರಿಸಿದ್ದಾರೆ.
ವರದಿ ವಿವಾದಕ್ಕೆ ದಾರಿ: ಈ ಮಧ್ಯೆ ಡಾ. ಸುದರ್ಶನ್ ನೇತೃತ್ವದ ತಂಡವು ಜಿಲ್ಲೆಯ ಆರ್ಸೆನಿಕ್ಯುಕ್ತ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಪರಿಸ್ಥಿತಿ ಪರಿಶೀಲಿಸಿದೆ. ತಜ್ಞರ ತಂಡವು ಇತ್ತೀಚೆಗೆ ಸರ್ಕಾರಕ್ಕೆ ನೀಡಿದ ವರದಿ ವಾಸ್ತವಕ್ಕೆ ದೂರವಾಗಿದೆ ಎಂಬ ಆರೋಪ ವ್ಯಾಪಕವಾಗಿದೆ. ತಂಡವು ಕೇವಲ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಸಂಚರಿಸಿ ಹಟ್ಟಿ ಚಿನ್ನದ ಗಣಿಯಿಂದಲೇ ಆರ್ಸೆನಿಕ್ ಅಂಶ ನೀರಿನಲ್ಲಿ ಸೇರಿದೆ ಎಂಬರ್ಥದ ವರದಿ ನೀಡಿದ್ದು, ವಿವಾದಕ್ಕೆ ದಾರಿ ಮಾಡಿದೆ.
ಗಣಿ ಆಡಳಿತ ಅಸಮಾಧಾನ: ವರದಿಯನ್ನು ಸಾರಾಸಗಟ ತಳ್ಳಿಹಾಕಿದ ಹಟ್ಟಿ ಚಿನ್ನದ ಗಣಿ ಆಡಳಿತವು, ಗಣಿಯಿಂದ ಸಮಸ್ಯೆಯಾಗಿದೆ ಎಂಬುದು ಸಮಂಜಸವಲ್ಲ. ಹಟ್ಟಿ ಚಿನ್ನದ ಗಣಿಯು ಕಳೆದ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಕಾಣಿಸಿಕೊಂಡಿರುವ ಸಮಸ್ಯೆಗೆ ಗಣಿಯನ್ನು ಹೊಣೆಯಾಗಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದೆ.
ಹಾಗೆಯೇ ಕೋಲಾರದಲ್ಲೂ ಈ ಹಿಂದೆ ಚಿನ್ನದ ಗಣಿಗಾರಿಕೆ ನಡೆಯುತ್ತಿತ್ತು. ಅಲ್ಲೇಕೆ ಆರ್ಸೆನಿಕ್ಯುಕ್ತ ನೀರು ಕಂಡುಬರಲಿಲ್ಲ ಎಂದು ಪ್ರಶ್ನಿಸಿರುವ ಆಡಳಿತ, ಹಟ್ಟಿಯಲ್ಲಿ ಕಳೆದ 65 ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದೆ. ಅಂದಿನಿಂದ ಪ್ರತಿ ತಿಂಗಳು ಗಣಿಯಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯ ಮತ್ತು ನೀರಿನ ಗುಣಮಟ್ಟವನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲಿಸುತ್ತಿದೆ. ನೀರಿನಲ್ಲಿ ಆರ್ಸೆನಿಕ್ ಪ್ರಮಾಣ ಮಿತಿಯೊಳಗೆ ಇರುವುದನ್ನು ಮಂಡಳಿಯು ದೃಢೀಕರಿಸಿದೆ. ಅಷ್ಟೇ ಅಲ್ಲ, ಆರ್ಸೆನಿಕ್ ನೀರಿನಲ್ಲಿ ಸೇರುತ್ತಿದೆ ಎಂಬುದು ವಾಸ್ತವಾಂಶವಲ್ಲ. ತಜ್ಞರ ವರದಿಯೇ ತೀರಾ ಅವೈಜ್ಞಾನಿಕವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸಮಗ್ರ ಅಧ್ಯಯನ ಅವಶ್ಯ: ಈ ಮಧ್ಯೆ ನೀರಿನಲ್ಲಿ ಆರ್ಸೆನಿಕ್ ಸೇರ್ಪಡೆಗೆ ಕಾರಣವಾಗಿರುವ ಅಂಶಗಳ ಬಗ್ಗೆ ಸಮಗ್ರ ಅಧ್ಯಯನದ ಅವಶ್ಯಕತೆಯಿದೆ. ಜಿಲ್ಲಾಡಳಿತ, ರಾಜ್ಯ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಬಳಿಯಿರುವ ಆರ್ಸೆನಿಕ್ಯುಕ್ತ ನೀರಿನ ಸಮಸ್ಯಾತ್ಮಕ ಗ್ರಾಮಗಳ ಅಂಕಿ- ಅಂಶಗಳ ಬಗ್ಗೆ ಸಾಕಷ್ಟು ವ್ಯತ್ಯಾಸವಿದೆ. ಜಿಲ್ಲೆಯಲ್ಲಿ ನೀರಿನ ಗುಣಮಟ್ಟ ಪರೀಕ್ಷಿಸುವ ಸುಸಜ್ಜಿತ ಪ್ರಯೋಗಾಲಯವೂ ಇಲ್ಲ. ಇಂಥ ಗೊಂದಲಗಳ ಮಧ್ಯೆಯೇ ಸರ್ಕಾರ ಹಣ ಕೊಟ್ಟು ನೀರು ಕುಡಿಯಿರಿ ಎಂದು ಹೇಳುತ್ತಲೇ ಶುದ್ಧ ನೀರೊದಗಿಸುವ ಯೋಜನೆಗಳ ಜಾರಿಗೆ ಮುಂದಾಗಿದೆ.
ಒಟ್ಟಿನಲ್ಲಿ ಆರ್ಸೆನಿಕ್ಯುಕ್ತ ಕುಡಿವ ನೀರು ಪಡೆಯುತ್ತಿರುವ ಗ್ರಾಮಗಳ ಸಮಸ್ಯೆಯ ಆಳ, ವಾಸ್ತವಾಂಶ ಮರೆಯಾಗಿ, ಸರ್ಕಾರ ಮೊದಲೇ ನಿರ್ಧರಿಸಿದಂತೆ ಶುದ್ಧ ನೀರಿನ ಘಟಕಗಳ ಸ್ಥಾಪನೆಗೆ ಪೂರಕ ಪರಿಸರ ನಿರ್ಮಾಣಕ್ಕೆ ಅಧಿಕಾರಿಗಳು ಹೆಣಗಾಡುವಂತೆ ತೋರುತ್ತಿದೆ ಎಂಬುದು ಗ್ರಾಮಸ್ಥರ ಅಸಮಾಧಾನ.
ಸಚಿವರಿಗೆ ಮಾಹಿತಿಯಿಲ್ಲವಂತೆ!
ನಗರದಲ್ಲಿ ಗುರುವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಆರ್ಸೆನಿಕ್ಯುಕ್ತ ನೀರಿನ ಸಮಸ್ಯಾತ್ಮಕ ಗ್ರಾಮಗಳ ಬಗ್ಗೆ ತಜ್ಞರು ಸರ್ಕಾರಕ್ಕೆ ಸಲ್ಲಿಸಿದ ವರದಿಯ ಅಂಶಗಳ ಬಗ್ಗೆ ತಮಗೆ ಮಾಹಿತಿಯಿಲ್ಲ ಎಂದು ಹೇಳಿ ಜಾರಿಕೊಂಡಿದ್ದಾರೆ.