ಚಂದ್ರಶೇಖರ್ ತಂಡಕ್ಕೆ ಗೆಲವು
ಕನ್ನಡಪ್ರಭ ವಾರ್ತೆ ಸಿಂಧನೂರು ಆ.1
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗುರುವಾರ ಹಾಲಿ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಅತ್ಯಧಿಕ ಮತಗಳ ಅಂತರದೊಂದಿಗೆ ಜಯಭೇರಿ ಬಾರಿಸಿದರೆ, ಸಂಘದ ಮಾಜಿ ಅಧ್ಯಕ್ಷ ವಿ.ಬಸವರಾಜ ಪೆನಾಲ್ ಮುಖಭಂಗಕ್ಕೆ ಒಳಗಾಯಿತು.
ನಗರದ ಬಿಆರ್ಸಿ ಕೇಂದ್ರದಲ್ಲಿ ನಡೆದ ಮತದಾನದಲ್ಲಿ 35 ಮತಗಳಲ್ಲಿ ಚಂದ್ರಶೇಖರ ಹಿರೇಮಠ 32 ಮತಗಳನ್ನು ಗಳಿಸಿ ಎರಡನೇ ಬಾರಿಗೆ ಅಧ್ಯಕ್ಷರಾದರೆ, ವಿ.ಬಸವರಾಜ ಪೆನಾಲ್ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಲ್ಲಪ್ಪ ಕೆ. ಕೇವಲ 3 ಮತಗಳನ್ನು ಪಡೆದು ಹೀನಾಯ ಸೋಲು ಅನುಭವಿಸಿದ್ದಾರೆ.
ಇಲ್ಲೂ ರಾಜಕೀಯ ಮುಖಂಡರ ಮೂಗು: ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ಹಿರೇಮಠ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎನ್ನುವಷ್ಟರಲ್ಲಿ ಮಲ್ಲಪ್ಪ ಎನ್ನುವವರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಯಿತು. ಚುನಾವಣೆಯ ಪೂರ್ವದಲ್ಲಿ ಭಾರಿ ಲಾಬಿ ನಡೆದಿತ್ತು. ಸರ್ಕಾರಿ ನೌಕರರ ಚುನಾವಣೆಯಾಗಿದ್ದರೂ ಇದರಲ್ಲಿ ರಾಜಕೀಯ ಮುಖಂಡರು ಪರೋಕ್ಷವಾಗಿ ಬೆಂಬಲಿಸಿದ್ದರು ಎನ್ನಲಾಗಿದೆ.
ವಿಶೇಷವೆಂದರೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಿರ್ದೇಶಕ ಚುನಾವಣೆಯಲ್ಲಿ ಚಂದ್ರಶೇಖರ ಹಿರೇಮಠ ಪೆನಾಲ್ನ ಯಾವುದೇ ಅಭ್ಯರ್ಥಿಗಳು ಜಯ ಗಳಿಸಿಲ್ಲ. ನಂತರ ಚಂದ್ರಶೇಖರ ತಂಡದ ಸದಸ್ಯರು ಪರಸ್ಪರ ಕೆಂಪು ಬಣ್ಣ ಹಾಕಿಕೊಂಡು ನಗರದಲ್ಲಿ ಡೊಳ್ಳು ಬಾರಿಸುತ್ತಾ ಮೆರವಣಿಗೆ ನಡೆಸಿದರು.