ಜಾತ್ರೆ: ಮದ್ಯ ಮಾರಾಟ ನಿಷೇಧ
ರಾಯಚೂರು: ತಾಲೂಕಿನ ಕಲ್ಮಲಾ ಗ್ರಾಮದ ಕರಿಯಪ್ಪ ತಾತಾ ದೇವಸ್ಥಾನದಲ್ಲಿ ಆ.10ರಂದು ನಡೆಯಲಿರುವ ಜಾತ್ರೆಯ ಹಿನ್ನೆಲೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಜಾತ್ರೆಗೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದಾರೆ. ಆ.10ರ ಬೆಳಗ್ಗೆ 6ರಿಂದ ಸೆ.ಆ.11ರ ಮಧ್ಯರಾತ್ರಿಯವರೆಗೆ ಹಾಗೂ ಶ್ರಾವಣ ಮಾಸದ ನಾಲ್ಕು ಸೋಮವಾರಗಳಂದು ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಸಂಘಕ್ಕೆ ಭೀಮಪ್ಪ ನಾಯಕ ಆಯ್ಕೆ
ಲಿಂಗಸ್ಗೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಲಿಂಗಸ್ಗೂರು ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಆ.1ರಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಭೀಮಪ್ಪ ನಾಯಕ ಆಯ್ಕೆಯಾಗಿರುತ್ತಾರೆ. ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಭೀಮಪ್ಪ ನಾಯಕ 34 ಮತಗಳು ಪಡೆದಿದ್ದು, ಇವರ ಪ್ರತಿಸ್ಪರ್ಧಿ ಕೆ.ಮಲ್ಲಯ್ಯ 26 ಮತಗಳನ್ನು ಪಡೆದಿದ್ದಾರೆ. ಅದರಂತೆ ಖಜಾಂಚಿ ಸ್ಥಾನಕ್ಕೆ ಬಿಸಿಎಂ ಇಲಾಖೆಯ ಶರಣಪ್ಪ ಸಾಹುಕಾರ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಪಿಡಬ್ಲ್ಯೂಡಿ ಇಲಾಖೆ ಹಾಜಿಸಾಬ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಅಮರೇಶ ತೋಪಲಕಟ್ಟಿ ತಿಳಿಸಿದ್ದಾರೆ.
4ರಂದು ಸಭೆ
ರಾಯಚೂರು: ತಾಲೂಕಿನ ಗಾಣದಾಳ ಗ್ರಾಮದಲ್ಲಿ ಜಿಲ್ಲಾ ಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದು ಈ ಹಿನ್ನೆಲೆಯಲ್ಲಿ ಆ.4ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ.
ಅಂದು ಬೆಳಗ್ಗೆ 11ಕ್ಕೆ ಗ್ರಾಮದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರ, ಗಣ್ಯರ, ಹಿತೈಷಿಗಳ ಸಭೆಯನ್ನು ಕರೆದಿದ್ದು ಸೆ. 22ರಂದು ಆಚರಿಸುವ ಜಿಲ್ಲಾ ಮಟ್ಟದ ವಿಶ್ವಕರ್ಮ ಜಯಂತಿ ಸಮಾರಂಭದ ಕುರಿತು ಚರ್ಚಿಸಲಾಗುತ್ತದೆ. ಈ ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಸಂಘಟಕ ಮಾರುತಿ ಬಡಿಗೇರ್ ಮನವಿ ಮಾಡಿದ್ದಾರೆ.