ಶಿರಸ್ತೇದಾರ ಪಾಟೀಲರಿಗೆ ಮುಕ್ತಿ ಯಾವಾಗ?
ಕನ್ನಡಪ್ರಭ ವಾರ್ತೆ ಸಿಂಧನೂರು ಆ.1
ಸಿಂಧನೂರು ತಹಸೀಲ್ದಾರ್ ಕಚೇರಿಯ ಚುನಾವಣಾ ವಿಭಾಗದಲ್ಲಿ ಶಿರಸ್ತೇದಾರರಾಗಿ ಕೆಲಸ ಮಾಡುತ್ತಿರುವ ಟಿ.ಪಿ. ಪಾಟೀಲ್ ಅವರನ್ನು ಜನವರಿ 11, 2013ರಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಕೆ. ಭಾನುಮತಿ ವರ್ಗಾವಣೆ ಮಾಡಿದ್ದರು, ಇಲ್ಲಿಯವರೆಗೂ ತಹಸೀಲ್ದಾರ್ ಅವರನ್ನು ಇಲ್ಲಿಂದ ವರ್ಗಾವಣೆ ಮಾಡುತ್ತಿಲ್ಲವೆಂದು ತಿಳಿದು ಬಂದಿದೆ.
ಅಧೀನ ಕಾರ್ಯದರ್ಶಿಗಳು ನೀಡಿದ ಅಧಿಕೃತ ಜ್ಞಪನಾ ಪತ್ರದಲ್ಲಿ ಪಾಟೀಲರನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ತಾಲೂಕು ಕಚೇರಿಯಲ್ಲಿ ಖಾಲಿ ಇರುವ ಶಿರಸ್ತೇದಾರ ಹುದ್ದೆಗೆ ಸಾರ್ವಜನಿಕ ಹಾಗೂ ಆಡಳಿತದ ಹಿತದೃಷ್ಟಿಯಿಂದ ತಕ್ಷಣ ಜಾರಿಗೆ ಬರುವಂತೆ ಆದೇಶವನ್ನು ತಿಳಿಸಿದ್ದಾರೆ. ನಿವೃತ್ತಿಗೆ ಕೇವಲ ಹತ್ತು ತಿಂಗಳ ಬಾಕಿ ಇರುವ ಇವರಿಗೆ ಆರೋಗ್ಯವೂ ಅಷ್ಟೊಂದು ಸರಿಯಾಗಿಲ್ಲ. ಈ ಮಧ್ಯೆ ಪ್ರಭಾರಿ ತಹಸೀಲ್ದಾರರಾಗಿ ಕಾರ್ಯನಿರ್ವಹಿಸಿದ ರಾಮಣ್ಣ ಹೊಸಮನಿ ಎ.ಸಿ. ಯವರ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಿಲ್ಲವೆಂದು ಹೇಳಲಾಗುತ್ತಿದೆ. ನಂತರ ಅಧಿಕಾರ ವಹಿಸಿಕೊಂಡ ಎಂ. ಚಂದ್ರಶೇಖರ ಸೇವೆಯಿಂದ ನಿಯುಕ್ತಿಗೊಳಿಸಲಿಲ್ಲ. ನಂತರ ಬಂದ್ ಆರ್.ಬಿ. ಲಿಂಗನಗೌಡರ ಬಿಡುಗಡೆ ಮಾಡುತ್ತೇನೆಂದು ಹೇಳುತ್ತಾ ಕಾಲಹರಣ ಮಾಡಿದರು. ಪ್ರಸ್ತುತ ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಇದುವರೆಗೂ ಎಂಎಲ್ಎ ಚುನಾವಣೆ ನಂತರ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ್ದರು. ಈಗ ವರಸೆ ಬದಲಾಯಿಸಿದ್ದಾರೆಂದು ಗೊತ್ತಾಗಿದೆ.
ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳು ಆದೇಶಿಸಿದ್ದರು, ಅನಾರೋಗ್ಯದಿಂದ ಇರುವ ಪಾಟೀಲರಿಗೆ ಮುಕ್ತಿ ಸಿಗುತ್ತಿಲ್ಲ. ಸರ್ಕಾರದ ಆದೇಶಗಳಿಗೆ ಬೆಲೆಯಿಲ್ಲವೆ ಎಂದು ಪಾಟೀಲ್ ನೊಂದು ಹೇಳುತ್ತಾರೆ.