ಸಾವಿರಾರು ಎಕರೆಗಿನ್ನೂ ತುಂಗಭದ್ರಾ ನೀರಿಲ್ಲ
ಎ.ಜಿ. ಕಾರಟಗಿ
ಕನ್ನಡಪ್ರಭ ವಾರ್ತೆ ಕಾರಟಗಿ ಆ.1
ಕೊಪ್ಪಳ-ರಾಯಚೂರು ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಟ್ಟು ತಿಂಗಳಾದರೂ ಕೊನೆ ಭಾಗಕ್ಕೆ ಇನ್ನೂ ನೀರು ತಲುಪಿಲ್ಲ. ಈ ಬಾರಿ ಅವಧಿಗೂ ಮುನ್ನವೇ ಅಣೆಕಟ್ಟು ಭರ್ತಿಯಾಗಿದ್ದು, ಜುಲೈ 10ರಂದೇ ಅಣೆಕಟ್ಟೆಯಿಂದ ಕಾಲುವೆಗೆ ನೀರು ಬಿಟ್ಟಿದ್ದರೂ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ತಲುಪಿಲ್ಲ.
ಕಾಲುವೆ ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ನೀರು ಮುಕ್ಕುತ್ತಿದ್ದು, ಕೊನೆ ಮತ್ತು ವಿತರಣಾ ನಾಲೆ ಕೆಳ ಭಾಗದ ರೈತರು ನೀರಿಗಾಗಿ ಬಿಕ್ಕುವಂತಾಗಿದೆ.
ಎಡದಂಡೆ ನಾಲೆಯ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ 30, 31 ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವ್ಯಾಪ್ತಿಯ 32ನೇ ವಿತರಣಾ ಕಾಲುವೆಯುದ್ದಕ್ಕೂ ಇರುವ ಉಪಕಾಲುವೆಗಳ ವ್ಯಾಪ್ತಿಯಲ್ಲಿ ಮಂಡಳಿ ನಿಗದಿಪಡಿಸಿರುವ ಭೂ ಪ್ರದೇಶಕ್ಕಿಂತ 3 ಪಟ್ಟು ಹೆಚ್ಚು ಭಾಗ ಸಾಗುವಳಿಯಾಗುತ್ತಿದೆ. ಇದರಿಂದ ಪಹಣಿ ಪತ್ರಿಕೆಯಲ್ಲಿ ನೀರಾವರಿ ಎಂದಿದ್ದರೂ ವರ್ಷದ ಕನಿಷ್ಠ 15-20 ದಿನಗಳಾದರೂ ನೀರು ಹರಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ ಕೆಳಭಾಗದ ರೈತರು.
ಅಚ್ಚುಕಟ್ಟು ಪ್ರದೇಶದಲ್ಲಿ ತುಂಗಭದ್ರಾ ನೀರಾವರಿ ಮಂಡಳಿ ನಿಗದಿಪಡಿಸಿದ ಬೆಳೆ ಪದ್ಧತಿಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಎಡದಂಡೆ ನಾಲೆಗೆ ನಿತ್ಯ 3600 ಕ್ಯುಸೆಕ್ ನೀರು ಹರಿಯುತ್ತಿದ್ದರೂ, ಅಧಿಕಾರಿಗಳ ವೈಫಲ್ಯ, ಸ್ವಾರ್ಥ, ಕಾಲುವೆ ಬುಡಕ್ಕೆ ಪೈಪ್ ಅಳವಡಿಕೆ, ನೀರ್ಗಳ್ಳತನ, ಅಕ್ರಮ ಕೆರೆ ನಿರ್ಮಾಣ, ನೀರು ಸಂಗ್ರಹಿಸುವುದು, ದೊಡ್ಡ ರೈತರೊಂದಿಗೆ ಅಪವಿತ್ರ ಮೈತ್ರಿ, ಅದಕ್ಷತೆ, ಭ್ರಷ್ಟಾಚಾರ, ಹತೋಟಿ ತಪ್ಪಿರುವುದರಿಂದ ಕಾಲುವೆ ಕಡೆಯವರೆಗೂ ನೀರು ತಲುಪುತ್ತಿಲ್ಲ.
ಸಮರ್ಪಕ ನೀರು ನಿರ್ವಹಣೆಗೆಂದು ಆಯಾ ಮೈಲ್ಗೆ ನೀರು ಹರಿಯುವ ಪ್ರಮಾಣ ನಿಗದಿ, ಮುಖ್ಯ ನಾಲೆ ಮತ್ತು ವಿತರಣಾ ಕಾಲುವೆಗಳಿಗೆ ವಾರಾಬಂದಿ ವಿಧಿಸಿದರೂ ಪ್ರಯೋಜನವಾಗಿಲ್ಲ. ರೈತ-ರೈತರ ನಡುವೆ ಹಲ್ಲೆ ಯತ್ನ, ಹಗಲು-ರಾತ್ರಿ ನೀರು ಬಳಕೆಗೆ ಪೈಪೋಟಿ, ಜಟಾಪಟಿ ನಡೆದಿದೆ.
ಅಗತ್ಯಕ್ಕಿಂತ ಹೆಚ್ಚು ಆಕಾರದ ಕೊಳವೆ, ಅಕ್ರಮ ತೂಬು, ರಿಪೇರಿ ಕಾಣದ ತೂಬಿನ ಬಾಗಿಲು, ಕೊನೆ ಹಂತಕ್ಕೆ ನೀರು ಮುಟ್ಟಿದ ಬಳಿಕ ಮೇಲ್ಭಾಗದ ಕಾಲುವೆ ಬಾಗಿಲು ತೆರೆಯುವ ನಿಯಮ ಕೈಬಿಟ್ಟಿದ್ದರಿಂದ ಪೂರೈಕೆ ಮತ್ತು ಹಂಚಿಕೆಯಲ್ಲಿ ಸಮಾನತೆ ಇಲ್ಲದಂತಾಗಿದೆ ಎನ್ನುತ್ತಾರೆ ನೀರಾವರಿ ತಜ್ಞರು.
ಅಕ್ರಮ ಕೆರೆಗಳು: ಗಂಗಾವತಿ ಮತ್ತು ಸಿಂಧನೂರು ಮೇಲ್ಭಾಗದಲ್ಲಿ ವಲಸಿಗರ ಪ್ರಮಾಣ ಜಾಸ್ತಿಯಾಗಿದ್ದು, ಅಕ್ರಮ ಕೆರೆಗಳದ್ದೇ ರಾಜ್ಯಭಾರವಾಗಿದೆ. ಪ್ರಭಾವಿಗಳು, ವಲಸಿಗರು ನಿಯಮಿತ ಅಚ್ಚುಕಟ್ಟು ಪ್ರದೇಶ ಬಿಟ್ಟು ವ್ಯಾಪ್ತಿಗೆ ಒಳಪಡದ ಜಮೀನು ಅಭಿವೃದ್ಧಿ ಪಡಿಸಿರುವುದರಿಂದ ಕೆಳಭಾಗಕ್ಕೆ ನೀರಿಲ್ಲವಾಗಿದೆ. ನೀರು ಇಲ್ಲಿ ಉಳ್ಳವರ ಪಾಲಾಗಿದ್ದು ಬಡವರು ಬಾಯಿ ಮುಚ್ಚಿಕೊಂಡಿದ್ದಾರೆ.
ವಿಚಿತ್ರ ಎಂದರೆ 30, 31 ಮತ್ತು 32ರ ವಿತರಣಾ ನಾಲೆಯ ವ್ಯಾಪ್ತಿಯಲ್ಲಿ ವಲಸಿಗರು, ಪ್ರಭಾವಿಗಳಿಗೆ ಸೇರಿರುವ ಕೆರೆಗಳಿವೆ. ಇವುಗಳಿಂದ ನೀರು ನಿರ್ವಹಣೆ ಸಮಸ್ಯೆ ತಲೆದೋರಿದೆ.