21ರಿಂದ ಶ್ರೀರಾಯರ ಆರಾಧನಾ ಮಹೋತ್ಸವ
ರಾಯಚೂರು: ಮಂತ್ರಾಲಯದ ರಾಘವೇಂದ್ರಸ್ವಾಮಿಗಳ 342ನೇ ಆರಾಧನಾ ಮಹೋತ್ಸವವು ಆ.21ರಿಂದ 23ರವರೆಗೆ ನಡೆಯಲಿದೆ. ಇದರಂಗವಾಗಿ ಸಪ್ತರಾತ್ರೋತ್ಸವ ಕಾರ್ಯಕ್ರಮಗಳು ಆ. 19ರಿಂದ 25ರವರೆಗೆ ನಡೆಯಲಿವೆ.
ಶ್ರೀಮಠದಲ್ಲಿ ಆ.19ರಂದು ಸಂಜೆ 5ರಿಂದ 8ರವರೆಗೆ ಪೀಠಾಧಿಪತಿಗಳಾದ ಸುಯತೀಂದ್ರ ತೀರ್ಥರು ಹಾಗೂ ಕಿರಿಯ ಶ್ರೀಗಳಾದ ಸುಬುಧೇಂದ್ರ ತೀರ್ಥರ ಸಾನಿಧ್ಯದಲ್ಲಿ ಸಪ್ತರಾತ್ರೋತ್ಸವದ ಉದ್ಘಾಟನೆ ನಡೆಯಲಿದೆ. ಅದೇ ದಿನ ಧ್ವಜಾರೋಹಣ, ಗೋ ಪೂಜೆ, ಗಜಪೂಜೆ, ಲಕ್ಷ್ಮೀ ಪೂಜೆ, ಧಾನ್ಯ ಪೂಜೆ, ಪ್ರಭಾ ಉತ್ಸವ ನಡೆಯಲಿದೆ.
ವಿವಿಧ ಕಾರ್ಯಕ್ರಮಗಳು: ಆ.20ರಂದು ಋಗ್ವೇದ, ಯಜುರ್ವೇದ ನಿತ್ಯ ಮತ್ತು ನೂತನ ಉಪಾಕರ್ಮ ಮತ್ತು ಶಾಕೋತ್ಸವ, ರಜತ ಮಂಟಪೋತ್ಸವ ನಡೆಯಲಿದೆ. ಆ.21ರಂದು ರಾಘವೇಂದ್ರಸ್ವಾಮಿಗಳ ಪೂರ್ವಾರಾಧನೆ ಅಂಗವಾಗಿ ಸಿಂಹ ವಾಹನೋತ್ಸವ ನಡೆಯಲಿದೆ. ಅದೇ ದಿನ ಸಂಜೆ 7.30ಕ್ಕೆ ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿಯನ್ನು ವಿದ್ವಾನ್ ಪಿ.ಎಸ್. ಲಕ್ಷ್ಮಿನಾರಾಯಣ ಉಪಾಧ್ಯಾಯ (ಮರಣೋತ್ತರವಾಗಿ) ಮತ್ತು ಸುಧೀಂದ್ರ ಮತ್ತು ವಾಮನ ಅವರಿಗೆ ಪ್ರದಾನ ಮಾಡಲಾಗುತ್ತದೆ. ಅದೇ ರೀತಿ ಆಸ್ಥಾನ್ ವಿದುಷಿ ಪುರಸ್ಕಾರವನ್ನು ಕಲೈಮಾಮಣಿ ವಿದುಷಿ ಎ. ಕನ್ಯಾಕುಮಾರಿ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಅಭಿಷೇಕ: ಆ.22ರಂದು ಶ್ರೀರಾಯರ ಮಧ್ಯಾರಾಧನೆ ಅಂಗವಾಗಿ ಮಹಾಪಂಚಾಮೃತ ಅಭಿಷೇಕ, ಜ್ಞಾನಯಜ್ಞ ನಡೆಯಲಿದೆ. ಆ. 23 ರಂದು ಶ್ರೀರಾಯರ ಉತ್ತರರಾಧನೆ ಅಂಗವಾಗಿ ಮಹಾರಥೋತ್ಸವ ನಡೆಯಲಿದೆ. ಆ.24ರಂದು ಸುಜ್ಞಾನೇಂದ್ರತೀರ್ಥರ ಆರಾಧನೆ, ಆ.25ರಂದು ಸರ್ವ ಸಮರ್ಪಣೋತ್ಸವ, ರಥೋತ್ಸವ ನಡೆಯಲಿದೆ.
ಆರಾಧನೆ ಸಂದರ್ಭ ದಿನವೂ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಬೆಳಗ್ಗೆ 4 ರಿಂದ 8.30ರವರೆಗೆ ನಿರ್ಮಾಲ್ಯ ವಿಸರ್ಜನೆ, ಶ್ರೀಉತ್ಸವ ರಾಯರ ಪಾದಪೂಜೆ, ಪಂಚಾಮೃತ ಅಭಿಷೇಕ ನಡೆಯಲಿದೆ. ಬೆಳಗ್ಗೆ 10.05 ರಿಂದ 11ರವರೆಗೆ ಜ್ಞಾನಯಜ್ಞ, ಪಂಡಿತರಿಂದ ಪ್ರವಚನ, ಬೆಳಗ್ಗೆ 11 ರಿಂದ 2.30 ರವರೆಗೆ ಮೂಲರಾಮ ದೇವರ ಪೂಜೆ, ಅಲಂಕಾರ, ಹಸ್ತೋದಕ, ಮಹಾ ಮಂಗಳಾರತಿ ಹಾಗೂ ಸಂಜೆ 5ರಿಂದ ಹಗಲು ದೀವಟಿಗೆ, ಮಲಕಿ ಮಂಗಳಾರತಿ, ಸ್ವಸ್ತಿ ವಾಚನ, ಪ್ರಾಕಾರ ಉತ್ಸವಗಳು ನಡೆಯಲಿವೆ.
ದಿನವೂ ಸಂಜೆ 5ರಿಂದ 8.30ರವರೆಗೆ ಆರಾಧನೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಖ್ಯಾತ ಹಾಡುಗಾರರಿಂದ ದಾಸವಾಣಿ, ಕಲಾವಿದರಿಂದ ಭರತನಾಟ್ಯ, ರೂಪಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಶ್ರೀಮಠ ತಿಳಿಸಿದೆ.