ಮಳೆ ಅಭಾವ; ಗುರಿ ತಲುಪದ ಬಿತ್ತನೆ
ಕನ್ನಡಪ್ರಭ ವಾರ್ತೆ ಯಾದಗಿರಿ ಆ.2
ರಾಜ್ಯಾದ್ಯಂತ ಈ ಬಾರಿ ಉತ್ತಮ ಮಳೆಯಾಗಿ, ಜಲಾಶಗಳೂ ಭರ್ತಿಯಾಗಿವೆ. ಆದರೆ ಜಿಲ್ಲೆಯಲ್ಲಿ ಮಾತ್ರ ಮಳೆ ಅಭಾವ ಕಂಡುಬಂದಿದ್ದು, ಮುಂಗಾರು ಬಿತ್ತನೆ ಕಾರ್ಯ ಗುರಿ ತಲುಪಲು ಸಾಧ್ಯವಾಗಿಲ್ಲ.
ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯವೂ ಭರ್ತಿಯಾಗಿ ಕೃಷ್ಣಾ ನದಿ ಪ್ರವಾಹ ಸೃಷ್ಟಿಸಿದೆ. ಇದರಿಂದ ನದಿ ತೀರದ ಅನೇಕ ಗ್ರಾಮಗಳ ಹೊಲಗಳು ಜಲಾವೃತಗೊಂಡು ಬೆಳೆ ನಾಶವಾಗಿದೆ. ಆದರೆ ಜಿಲ್ಲೆಯ ವಾರ್ಷಿಕ ಮಳೆ ಇನ್ನೂ ಆಗಿಲ್ಲ. ಅದರಲ್ಲೂ ಯಾದಗಿರಿ ಹಾಗೂ ಗುರುಮಠಕಲ್ ಭಾಗದಲ್ಲಿ ಮಳೆ ಅಭಾವ ಹೆಚ್ಚಿದೆ. ಇದರಿಂದ ಬಿತ್ತನೆ ಪ್ರಮಾಣ ಕುಸಿದಿದೆ.
ಗುರಿ ತಲುಪಿಲ್ಲ: ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 836 ಮಿಮೀ ಇದ್ದು, ಜುಲೈ ಅಂತ್ಯದವರೆಗೆ ಸರಾಸರಿ 340 ಮಿಮೀ ಮಳೆಯಾಗಬೇಕಿತ್ತು. ಆದರೆ ಇದುವರೆಗೆ ಕೇವಲ 257 ಮಿಮೀ ಮಳೆ ಬಿದ್ದಿದೆ. ಸುಮಾರು 83 ಮಿಮೀ ಮಳೆ ಕೊರತೆಯಾಗಿದೆ. ಕೃಷಿ ಇಲಾಖೆಯು ಮುಂಗಾರು ಹಂಗಾಮಿನಲ್ಲಿ 2,68,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿತ್ತು. ಆದರೆ ಇದುವರೆಗೆ 2.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ.79ರಷ್ಟು ಗುರಿ ಸಾಧನೆಯಾಗಿದೆ.
ಕೈಕೊಟ್ಟ ಹೆಸರು: ಜೂನ್ ತಿಂಗಳಲ್ಲಿ ಮಳೆ ಬಂದರೆ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕು ಪಡೆದುಕೊಳ್ಳುತ್ತಿತ್ತು. ಆದರೆ ಮುಂಗಾರು ಆರಂಭದಲ್ಲಿ ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಕ್ಷೇತ್ರ ಕಡಿಮೆಯಾಗಿದೆ. ಅಲ್ಲದೇ ಜುಲೈ ತಿಂಗಳಲ್ಲಿ ಅಲ್ಪ ಮಳೆಯಾದರೂ ಜಿಲ್ಲೆಯ ಪ್ರಮುಖ ಬೆಳೆಯಾದ ಹೆಸರು ಬಿತ್ತನೆ ಸಾಧ್ಯವಾಗಿಲ್ಲ. ಜುಲೈ ಆರಂಭದಲ್ಲಿ ಹೆಸರು ಬಿತ್ತನೆಯಾದಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ಪೀಕು ಕೈಗೆ ಬರುತ್ತಿತ್ತು. ಯಾದಗಿರಿ ತಾಲೂಕಿನಲ್ಲಿ ಹೆಸರು ಪ್ರಮುಖ ಬೆಳೆಯಾಗಿತ್ತು. ಆದರೆ ಮಳೆಯಿಲ್ಲದೇ ಹೆಸರು ಬಿತ್ತನೆಯೇ ಆಗಿಲ್ಲ. ಇನ್ನು ಕೆಲ ಭಾಗಗಳಲ್ಲಿ ತಡವಾಗಿ ಬಿತ್ತನೆ ಮಾಡಿದ್ದ ಹೆಸರು ಈಗ ಮಳೆಗೆ ಸಿಲುಕಿದೆ. ಇದರಿಂದ ಈ ಭಾರಿ ಜಿಲ್ಲೆಯಲ್ಲಿ ಹೆಸರು ಕೈಕೊಟ್ಟಿದೆ. ಆರ್ಥಿಕವಾಗಿ ಲಾಭ ತರುತ್ತಿದ್ದ ಈ ಬೆಳೆ ರೈತರ ಕೈಹಿಡಿದಿಲ್ಲ.
ಬತ್ತವೇ ಅಧಿಕ: ಕೃಷಿ ಇಲಾಖೆಯು ಮುಂಗಾರು ಹಂಗಾಮಿನಲ್ಲಿ ಹಾಕಿಕೊಂಡಿದ್ದ ಬಿತ್ತನೆ ಗುರಿಯಲ್ಲಿ ಪ್ರತಿಶತ ಮುಕ್ಕಾಲು ಭಾಗ ಬಿತ್ತನೆಯಾಗಿದೆ ಎಂದು ಹೇಳುತ್ತಿದೆ. ಆದರೆ ಇದರಲ್ಲಿ ಕಾಲುವೆ ಪ್ರದೇಶದ ಬಿತ್ತನೆಯೇ ಹೆಚ್ಚಾಗಿದೆ. ಅದರಲ್ಲೂ ಕಾಲುವೆ ಪ್ರದೇಶದಲ್ಲಿ ನಿಷೇಧಿತ ಬೆಳೆಯಾದ ಬತ್ತ ಬಿತ್ತನೆಯಾದ ಕ್ಷೇತ್ರ ಅಧಿಕವಿದೆ. ಇದರಿಂದ ಒಣ ಬೇಸಾಯ ಪ್ರದೇಶದ ರೈತರಿಗೆ ತೊಂದರೆಯಾಗಿದೆ. ಕೃಷಿ ಇಲಾಖೆಯು ಸರ್ಕಾರಕ್ಕೆ ವರದಿ ಸಲ್ಲಿಸುವಾಗ ಜಿಲ್ಲೆಯ ಬಿತ್ತನೆ ಹಾಗೂ ಮಳೆ ಪ್ರಮಾಣವನ್ನು ತಿಳಿಸುತ್ತದೆ. ಆದರೆ ಕಾಲುವೆ ಜಾಲವನ್ನು ಹೊರತುಪಡಿಸಿ ಉಳಿದ ಕಡೆ ಮಳೆಯೂ ಇಲ್ಲ, ಇತ್ತ ಬಿತ್ತನೆಯೂ ಆಗಿಲ್ಲ. ಆದರೆ ಸರ್ಕಾರ ಇದನ್ನು ಪರಿಗಣಿಸದೇ ಬರ ಪೀಡಿತ ಪ್ರದೇಶದ ರೈತರಿಗೆ ಪರಿಹಾರವನ್ನೂ ಕೊಡುವುದಿಲ್ಲ.
ನೆರೆಗೆ ಬೆಳೆ ಹಾನಿ: ಮಳೆ ಅಭಾವದಿಂದ ಒಂದು ಕಡೆ ರೈತರು ತೊಂದರೆ ಅನುಭವಿಸುತ್ತಿದ್ದರೆ ಕಳೆದ ಎರಡು ವಾರದಿಂದ ನಾರಾಯಣಪುರ ಜಲಾಶಯದಿಂದ ಸತತವಾಗಿ ನೀರು ಬಿಡುತ್ತಿರುವುದರಿಂದ ಕೃಷ್ಣಾ ನದಿ ತೀರದ ಹೊಲಗಳಿಗೆ ನೀರು ನುಗ್ಗಿದೆ. ಅಲ್ಲಿ ಬೆಳೆದಿದ್ದ ಕಬ್ಬು, ಹತ್ತಿ, ಸಜ್ಜೆ ಇನ್ನಿತರ ಬೆಳೆ ಹಾನಿಯಾಗಿದೆ. ಆದರೆ ಇದುವರೆಗೆ ಎಷ್ಟು ಎಕರೆ ಬೆಳೆ ಹಾನಿಯಾಗಿದೆ ಎನ್ನುವುದು ಗೊತ್ತಾಗಿಲ್ಲ. ಕಂದಾಯ ಇಲಾಖೆ ಸಿಬ್ಬಂದಿ ನೆರೆಯಿಂದ ಆಗಿರುವ ಹಾನಿ ಸಮೀಕ್ಷೆ ನಡೆಸುತ್ತಿದ್ದಾರೆ. ಅವರು ನೀಡುವ ವರದಿ ಮೇಲೆ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ ತಿಳಿಸಿದರು.
ತಪ್ಪು ಮಾಹಿತಿ ನೀಡಬೇಡಿ: 2011-12ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬರ ಎದುರಾಗಿತ್ತು. ಆದರೆ ಕೃಷಿ ಇಲಾಖೆ ನೀಡಿದ ತಪ್ಪು ಅಂಕಿಅಂಶಗಳಿಂದ ಎಡವಟ್ಟು ಆಗಿತ್ತು. ಶಹಾಪುರ ಹಾಗೂ ಸುರಪುರ ತಾಲೂಕಿನಲ್ಲಿ ಮಳೆ ಕಡಿಮೆಯಾದ್ದರಿಂದ ಬರ ಪೀಡಿತ ಎಂದು ಸರ್ಕಾರ ಘೋಷಿಸಿತ್ತು. ಆದರೆ ಯಾದಗಿರಿಯನ್ನು ಮಾತ್ರ ಕೈಬಿಡಲಾಗಿತ್ತು. ವಾಡಿಕೆ ಮಳೆಯಾಗಿದೆ ಎಂದು ಕೃಷಿ ಇಲಾಖೆ ವರದಿ ನೀಡಿದ್ದರಿಂದ ಬರ ಪೀಡಿತ ಪ್ರದೇಶದ ಸೌಲಭ್ಯದಿಂದಲೂ ಯಾದಗಿರಿ ತಾಲೂಕು ವಂಚಿತವಾಗುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಮತ್ತೆ ಅದೇ ರೀತಿ ಆಗಬಾರದು. ಮಳೆ ಕೊರತೆಯಿಂದ ರೈತರು ಗುಳೆ ಹೋಗುತ್ತಿದ್ದಾರೆ. ಬಿತ್ತನೆಯಾಗದೇ ಹೊಲಗಳು ಬೀಳು ಬಿಟ್ಟಿವೆ. ಪಂಪ್ಸೆಟ್ ಮೂಲಕ ನೀರಾವರಿ ಮಾಡಿಕೊಂಡು ಬಿತ್ತನೆ ಮಾಡಿದ್ದರೂ ಅದನ್ನು ಕೃಷಿ ಇಲಾಖೆ ತನ್ನ ಗುರಿ ಸಾಧನೆಯಲ್ಲಿ ಸೇರಿಸಿಕೊಳ್ಳುತ್ತಿದೆ. ಆದ್ದರಿಂದ ಕೃಷಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ನಂತರ ವರದಿ ಕೊಡಬೇಕು ಎಂದು ಜಿಪಂ ಸದಸ್ಯ ದೇವರಾಜ ನಾಯಕ ಒತ್ತಾಯಿಸಿದ್ದಾರೆ. ಕಾಗದದಲ್ಲಿ ಬಿತ್ತನೆ ಗುರಿ ಸಾಧನೆ ತೋರಿಸಿದರೆ ರೈತರು ತೊಂದರೆ ಅನುಭವಿಸುವಂತಾಗುತ್ತದೆ ಎಂದು ಹೇಳಿದ್ದಾರೆ.