ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಖಾತ್ರಿ, ಆಹಾರ ಭದ್ರತೆ ವಿಫಲ

Mainashree
Updated On : 4 Aug 2013, 12:11 pm

ಕನ್ನಡಪ್ರಭ ವಾರ್ತೆ  ಲಿಂಗಸ್ಗೂರು  ಆ.3
ದೇಶದೆಲ್ಲೆಡೆ ಕೇಂದ್ರದ ಆಡಳಿತಾರೂಢ ಯುಪಿಎ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಹಾಗೂ ಆಹಾರ ಭದ್ರತೆ ಯೋಜನೆಗಳು ಬಡ ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲವೆಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ರುಪಾಯಿ ಮೌಲ್ಯ ಕುಸಿದಿದ್ದು, ಇದರಿಂದ ದೇಶಕ್ಕೆ ಬೆಲೆ ಇಲ್ಲದಂತಾಗಿದೆ ಹಾಗೂ 20 ಅಂಶಗಳ ಕಾರ್ಯಕ್ರಮಗಳು ವಿಫಲಗೊಂಡಿವೆ ಎಂದು ದೂರಿದರು.
ಬಿಎಸ್‌ವೈ, ರಾಮುಲು ಮತ್ತೆ ಬಿಜೆಪಿಗೆ- ಯತ್ನ: ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಪಕ್ಷದ ಸಿದ್ಧಾಂತ ಬದಿಗೊತ್ತಿ ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿತು. ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಪುನಃ ಕರೆತರಲು ಹೈಕಮಾಂಡ್ ಚಿಂತನೆ ನಡೆಸಿದ್ದು, ಅವರು ಮರಳಿ ಬರುವ ಆಶಾಭಾವನೆ ಹೊಂದಿರುವುದಾಗಿ ತಿಳಿಸಿದರು.
ಪಕ್ಷ ಸಂಘಟನೆಗೆ ಒತ್ತು: ದೇಶಕ್ಕೆ ಕ್ರೀಯಾಶೀಲ ಪ್ರಧಾನಮಂತ್ರಿಗಳ ಅವಶ್ಯಕತೆಯಿದ್ದು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆ ಅಲಂಕರಿಸುವ ಸೂಚನೆಗಳು ಕಂಡು ಬರುತ್ತಿದೆ. ಬರುವ ಲೋಕಸಭಾ ಚುನಾವಣೆ ನಿಮಿತ್ತ ಗ್ರಾಮ ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಬೇಕಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಂಡೇಶ ವಲ್ಕಂದಿನ್ನಿ ಮಾತನಾಡಿ, ಕೇಂದ್ರದ ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ನಡೆಸುವ ಜೊತೆಗೆ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಪಕ್ಷದ ಸಂಘಟನಾ ಪರ್ವ ಆರಂಭಗೊಂಡಿದೆ.
ಶೀಘ್ರವೇ ಪದಾಧಿಕಾರಿಗಳ ಆಯ್ಕೆ: ರೈತ, ಪರಿಶಿಷ್ಟ ಜಾತಿ ಹಾಗೂ ಪಂಗಡ, ಅಲ್ಪಸಂಖ್ಯಾತ ಸೇರಿದಂತೆ ಒಟ್ಟು 7 ಯುವ ಮೋರ್ಚಾಗಳಿಗೆ ಶೀಘ್ರವಾಗಿ ಎಲ್ಲ ತಾಲೂಕು ಘಟಕಗಳಿಂದ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಆ.5ರಿಂದ 12 ರವರೆಗೆ ಪಕ್ಷ ಸಂಘಟನೆ ಉದ್ದೇಶದಿಂದ 'ಹಳ್ಳಿಗೆ ನಡೆಯಿರಿ' ಅಭಿಯಾನ ಮೂಲಕ ಸಕ್ರೀಯ ಸದಸ್ಯತ್ವ ಅಭಿಯಾನ ಚುರುಕುಗೊಳಿಸಿ ಪಕ್ಷದ ಪದಾಧಿಕಾರಿಗಳು 100 ಶುಲ್ಕ ಪಡೆದು ಸದಸ್ಯತ್ವ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ತಾಲೂಕು ಪರಿಶಿಷ್ಟ ಜಾತಿ ಮೋರ್ಚಾದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾದ ನೂತನ ಅಧ್ಯಕ್ಷರನ್ನಾಗಿ ನಾರಾಯಣ ನಾಯಕ ಹಾಗೂ ಕಾರ್ಯದರ್ಶಿಯಾಗಿ ಮಂಜುನಾಥ ವಕೀಲರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮಾನಂದ ಯಾದವ, ತಾಲೂಕಾಧ್ಯಕ್ಷ ಸಿದ್ಧನಗೌಡ ಪಾಟೀಲ್, ಕಾರ್ಯದರ್ಶಿ ದೇವೇಂದ್ರ ನಾಯಕ, ಮುಖಂಡರಾದ ದೇವಿ ಪ್ರಸಾದ, ರಮೇಶ ಜೋಷಿ, ಜೀವಲೆಪ್ಪ ನಾಯಕ,ಶೇಷಣ್ಣ ಮುದಗಲ್, ಶಿವಪ್ರಕಾಶ ಕುಂಬಾರ, ಮಹ್ಮದ್ ಶಿರಾಜುದ್ದಿನ್, ಅಬ್ದುಲ್ ರೌಫ್, ಮಂಜುನಾಥ, ಮೋಬಿನ್‌ಸಾಬ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement