ರಾಯಚೂರು ನರಕ!
ಕನ್ನಡಪ್ರಭ ವಾರ್ತೆ ರಾಯಚೂರು ಆ.3
ಭ್ರಷ್ಟಾಚಾರ, ಅವ್ಯವಸ್ಥೆಯ ವಿರುದ್ಧ ಜನಸಂಗ್ರಾಮ ಪರಿಷತ್ ನಡೆಸಿದ್ದ ಎಲ್ಲ ಹೋರಾಟಗಳಲ್ಲಿ ಶಾಸಕ ಡಾ. ಶಿವರಾಜ್ ಪಾಟೀಲ್ ಮುಂಚೂಣಿಯಲ್ಲಿದ್ದರು. ಆದರೆ ಅವರೇ ರಾಯಚೂರು ನಗರದ ಅವ್ಯವಸ್ಥೆಯ ಬಗ್ಗೆ ಚಕಾರವೆತ್ತುತ್ತಿಲ್ಲ. ರಾಯಚೂರು ನಗರ ನರಕವಾಗಿದೆ. ಆ.15ರೊಳಗೆ ರಸ್ತೆ ದುರಸ್ತಿಗೊಳಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಜನಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಟಗಿ ಎಚ್ಚರಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಎಲ್ಲ ಪ್ರಮುಖ ರಸ್ತೆಗಳು, ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಆಳವಾದ ತಗ್ಗುಗಳಾಗಿವೆ. ಇತ್ತೀಚೆಗೆ ಸುರಿದ ಮಳೆಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಆದರೆ ಶಾಸಕರು ಮಾತ್ರ ಮೌನ ವಹಿಸಿದ್ದಾರೆಂದು ಟೀಕಿಸಿದರು.
ದುರದೃಷ್ಟಕರ: ಜನಸಂಗ್ರಾಮ ಪರಿಷತ್ನಿಂದ ಈ ಹಿಂದೆ ಅಣ್ಣಾ ಹಜಾರೆ ಹಾಗೂ ಬಾಬಾ ರಾಮದೇವ್ ಪರ ಹೋರಾಟ ನಡೆಸಿದಾಗ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಸದ್ಯ ಅವ್ಯವಸ್ಥೆ ವಿರುದ್ಧ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ ಸಂಗತಿ ಎಂದರು.
ಶಾಸಕರ ಸುತ್ತಲೂ ಗುತ್ತಿಗೆದಾರರೇ ಸೇರಿಕೊಂಡಿದ್ದಾರೆ. ಹೋರಾಟಗಾರರು ನಗರದ ಅವ್ಯವಸ್ಥೆಯನ್ನು ಖಂಡಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದರೆ ಕುಹಕದ ಮಾತನಾಡುತ್ತಿದ್ದಾರೆ. ಇಂಥ ವ್ಯಕ್ತಿಗಳ ಪರವಾಗಿ ಶಾಸಕರು ನಿಲ್ಲುವುದು ಸರಿಯಲ್ಲ. ನಗರದ ಜನತೆಯ ಬಗ್ಗೆ ಕನಿಷ್ಠ ಕಾಳಜಿಯೂ ಅಗತ್ಯ ಎಂದು ಹೇಳಿದರು.
ದಿಂಡುರುಳಿಕೆಗೂ ಸಾಧ್ಯವಿಲ್ಲ: ನಗರದ ರಸ್ತೆಗಳ ಹದಗೆಟ್ಟ ಸ್ಥಿತಿಯ ಹಿನ್ನೆಲೆ ಈ ಹಿಂದೆ ದಿಂಡುರುಳಿಕೆ ಮೂಲಕ ಪ್ರತಿಭಟಿಸುವ ಎಚ್ಚರಿಕೆ ನೀಡಲಾಗಿತ್ತು. ಆದರೆ ದಿಂಡುರುಳಿಕೆ ಉರುಳಲೂ ನಗರದಲ್ಲಿನ ರಸ್ತೆಗಳಲ್ಲಿ ಅವಕಾಶವಿಲ್ಲದಷ್ಟು ತಗ್ಗುಗಳಾಗಿವೆ. ನಗರದ ಜನತೆ ಏಳುತ್ತ ಬೀಳುತ್ತಲೇ ಸಾಗುತ್ತಿದ್ದಾರೆಂದು ಆರೋಪಿಸಿದರು.
ರಾಯಚೂರು ನಗರ ವಾಸಕ್ಕೆ ಯೋಗ್ಯವಲ್ಲ ಎಂಬ ಸ್ಥಿತಿ ತಲುಪಿದ್ದರೂ ಶಾಸಕ ಡಾ. ಶಿವರಾಜ್ ಪಾಟೀಲ್ ಸ್ಥಳೀಯ ಸಮಸ್ಯೆಗಳತ್ತ ಗಮನಹರಿಸುತ್ತಿಲ್ಲ. ಕೋಟಿಗಟ್ಟಲೆ ಹಣ ಸುರಿದು ನಿರ್ಮಿಸಿದ ಚತುಷ್ಪಥ ರಸ್ತೆಯಲ್ಲಿಯೂ ತಗ್ಗುಗಳಾಗಿವೆ. ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಸ್ತಾಂತರಿಸಿದ ಬಗ್ಗೆ ಮಾಹಿತಿಯಿದೆ ಎಂದು ದೂರಿದರು.
ತಾಳ್ಮೆಯುಳ್ಳ ಜನತೆ: ಹದಗೆಟ್ಟ ರಸ್ತೆಗಳು, ತುಂಬಿ ಹರಿಯುವ ಚರಂಡಿಗಳು, ಎಲ್ಲೆಲ್ಲೂ ಕಾಣಸಿಗುವ ಪ್ಲಾಸ್ಟಿಕ್ ತ್ಯಾಜ್ಯಗಳ ಮಧ್ಯೆಯೇ ನಗರದ ಜನತೆ ಅಗಾಧವಾದ ತಾಳ್ಮೆಯಿಂದ ಬದುಕು ಕಳೆಯುತ್ತಿದ್ದಾರೆ. ನಗರದ ಜನತೆ ನಿಜಕ್ಕೂ ಅಭಿನಂದನೀಯರು ಎಂದು ಅವರು ಕುಟುಕಿದರು.
ಹಕ್ಕುಚ್ಯುತಿ- ಕೋರ್ಟ್ಗೆ ಪರಿಷತ್: ಗೋಮಾಳ, ಕೆರೆ, ಅರಣ್ಯ ಪ್ರದೇಶ ಒತ್ತುವರಿಯ ಬಗ್ಗೆ ಸರ್ಕಾರಕ್ಕೆ ಪ್ರಾಮಾಣಿಕವಾಗಿ ವರದಿ ಸಲ್ಲಿಸಿದ ಡಾ. ಬಾಲಸುಬ್ರಹ್ಮಣ್ಯಂ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅವರ ವಿರುದ್ಧವೇ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿರುವ ರಮೇಶ್ ಕುಮಾರ್, ಸದಾನಂದಗೌಡ ಮತ್ತಿತರರ ವಿರುದ್ಧ ನ್ಯಾಯಾಲಯದ ಮೂಲಕ ಜನಸಂಗ್ರಾಮ ಪರಿಷತ್ ಹೋರಾಡಿ ಕಾರಾಗೃಹಕ್ಕೆ ಕಳಿಸುವ ಪ್ರಯತ್ನ ಮಾಡಲಿದೆ ಎಂದರು.
ಕೆಲವೇ ಕೆಲ ಪ್ರಾಮಾಣಿಕ ಐಎಎಸ್ ಅಧಿಕಾರಿಗಳಲ್ಲಿ ಬಾಲಸುಬ್ರಹ್ಮಣ್ಯಂ ಅವರೂ ಒಬ್ಬರು. ಅಂಥ ಅಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಮುಂದಾಗಿರುವ ನಾಯಕರ ವಿರುದ್ಧ ಸಂಘಟನೆಯ ಲಕ್ಷಾಂತರ ಜನತೆ ಹೋರಾಟಕ್ಕಿಳಿಯಲಿದ್ದಾರೆ. ಎಲ್ಲರೂ ಹಕ್ಕುಚ್ಯುತಿ ಎದುರಿಸಲು ಸಿದ್ಧ ಎಂದು ಸವಾಲು ಹಾಕಿದರು.
ಕಲಂ 371(ಜೆ) ಅನುಷ್ಠಾನಗೊಳಿಸಿ: ಹೈದ್ರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ರೂಪಿಸಿದ 371(ಜೆ)ನೇ ಕಲಂಗೆ ಸಂಬಂಧಿಸಿ ಸಂಪುಟ ಉಪಸಮಿತಿ ಸಲ್ಲಿಸಿದ ವರದಿಯು ಈ ಭಾಗದ ಜನರ ನಿರೀಕ್ಷೆಯನ್ನು ಶೇ. 95ರಷ್ಟು ಒಳಗೊಂಡಿದೆ. ಆದಷ್ಟು ಶೀಘ್ರ ರಾಜ್ಯ ಸರ್ಕಾರ ಈ ನಿಯಮಗಳ ಅನುಷ್ಠಾನ ಮತ್ತು ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ರಾಮನಗೌಡ ಜಾಲಿಬೆಂಚಿ, ಬಂದೇನವಾಜ್ ಸೇರಿ ಅನೇಕರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.