ಸತತ ಪ್ರಯತ್ನದಿಂದ ಯಶಸ್ಸು ಸಾಧಿಸಿ
ಕನ್ನಡಪ್ರಭ ವಾರ್ತೆ ಸಿಂಧನೂರು ಆ.3
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮನಃಪೂರ್ವಕವಾಗಿ ವಿದ್ಯಾಭ್ಯಾಸ ಮಾಡಬೇಕು. ಅಂದರೆ ಮಾತ್ರ ಗುರಿ ಮುಟ್ಟಲು ಸಾಧ್ಯ. ಇದಕ್ಕೆ ಶಿಕ್ಷಕರ ಸೂಕ್ತ ಮಾರ್ಗದರ್ಶನ ಅವಶ್ಯ ಎಂದು ನಗರ ಠಾಣೆ ಪಿಎಸ್ಐ ನಿಂಗಪ್ಪ ಹೇಳಿದರು.
ನಗರದ ಸೃಷ್ಟಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಸತತ ಪ್ರಯತ್ನ ಮುಖ್ಯ: ವಿದ್ಯಾರ್ಥಿಗಳು ಪ್ರತಿನಿತ್ಯ ಓದುವುದರ ಗುರಿಯಿಟ್ಟುಕೊಂಡು ಜೀವನ ಬಗ್ಗೆ ಕಾಳಜಿ ವಹಿಸಿದರೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸತತ ಪ್ರಯತ್ನ, ವಿನಯ, ಸದ್ಭಾವ, ಗೌರವದಿಂದ ನಡೆದುಕೊಳ್ಳುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವಲ್ಲಿ ಮುಂದೆ ಸಾಗುತ್ತಾರೆ ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ರಾಜಶೇಖರ ಮಾತನಾಡಿ, ವಿದ್ಯಾರ್ಥಿಗಳು ಮೂಢನಂಬಿಕೆಯಿಂದ ದೂರವಿದ್ದು ಕಣ್ಣಿಗೆ ಕಾಣದ ದೇವರನ್ನು ಪೂಜಿಸುವುದಕ್ಕಿಂತ, ಕಣ್ಣಿಗೆ ಕಾಣುವ ತಂದೆ- ತಾಯಿ ಗುರು ವೃಂದದವರ ಆಶೀರ್ವಾದ ಇದ್ದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ನಂತರ ವಿದ್ಯಾರ್ಥಿಗಳಿಗೆ ಪವಾಡ ಬಯಲು ಕಾರ್ಯಕ್ರಮ ನೆರವೇರಿಸಿಕೊಟ್ಟರು.
ನಡೆ- ನುಡಿ ಸ್ವಚ್ಛವಾಗಿರಲಿ: ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ರೌಡಕುಂದ ಮರಿಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮದು ಬಹುಸಂಸ್ಕೃತಿ ದೇಶವಾಗಿದ್ದು, ನಡೆ- ನುಡಿ, ಸಿದ್ಧಾಂತ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿ ಸೂರಜ್ ಹೆಗಡೆ ಮಾತನಾಡಿ, ನನ್ನ ವಿದ್ಯಾಭ್ಯಾಸದಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು ಸಂತೋಷವಾಗಿದೆ. ಇದಕ್ಕೆ ನನ್ನ ಗುರಿ ಮೊದಲ ಕಾರಣ. ನಂತರ ಗುರುಗಳು, ತಂದೆ- ತಾಯಿಗಳ ಪ್ರೋತ್ಸಾಹ ಕಾರಣವಾಗಿದೆ. ನಾನು ಪ್ರತಿನಿತ್ಯ 8 ಗಂಟೆ ಕಾಲ ನಿರಂತರ ವಿದ್ಯಾಭ್ಯಾಸ ಮಾಡುತ್ತೇನೆ ಎಂದರು.
ಬೆಳಗಿನ ಅಧ್ಯಯನ ಉತ್ತಮ: ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿ ಸಂದೀಪ ಗೊರೇಬಾಳ ಮಾತನಾಡಿ, ನನ್ನ ಗುರಿಗೆ ಸತತ ಪ್ರಯತ್ನದ ಅಭ್ಯಾಸವೇ ಕಾರಣ. ಇದರ ಜೊತೆಗೆ ಪ್ರತಿನಿತ್ಯ ಬೆಳಗಿನ ಜಾವ 4ರಿಂದ 8 ಗಂಟೆಯವರೆಗೆ ಓದುವ ಅಭ್ಯಾಸ ರೂಢಿಸಿಕೊಂಡಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ಗಿರಿಜಾ, ಮೀನಾಕ್ಷಿ ಪಬ್ಲಿಕ್ ಆಡಳಿತಧಿಕಾರಿ ಚಂದ್ರಕಲಾ ಪ್ರಕಾಶ, ಕಾಂಗ್ರೆಸ್ ಯುವ ಮುಖಂಡರಾದ ಚಂದ್ರುಗೌಡ ಬಾದರ್ಲಿ, ಪ್ರಸನ್ನ ಪಾಟೀಲ್ ಮಸ್ಕಿ, ಉಮೇಶ ಸಿದ್ರಾಂಪುರ, ಪಿ.ಸುದರ್ಶನರಾವ್ ಇದ್ದರು.
ಉಪನ್ಯಾಸಕ ವೀರೇಶ ಸ್ವಾಗತಿಸಿದರು. ರಮೇಶ ನಿರೂಪಿಸಿದರು. ಅಮರೇಶ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾಲೇಜಿನ ವಿದ್ಯಾರ್ಥಿಗಳಾದ ವೆಂಕೋಬ, ಸಿದ್ದರಾಮೇಶ ಇವರನ್ನು ಸನ್ಮಾನಿಸಲಾಯಿತು.