ಅನುದಾನ ನೀಡಿ ರೇಲ್ವೆ ಕಾಮಗಾರಿ ಮುಗಿಸಿ
ಕನ್ನಡಪ್ರಭ ವಾರ್ತೆ , ಗಂಗಾವತಿ , ಆ.4
16 ವರ್ಷಗಳ ಹಿಂದೆ ಮಂಜೂರಾಗಿರುವ ಮುನಿರಾಬಾದ್-ಮೆಹಬೂಬ ನಗರ ರೇಲ್ವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಕೂಡಲೇ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕಾಮಗಾರಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಲೋಕಸಭಾ ಸದಸ್ಯ ಶಿವರಾಮಗೌಡ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಗಂಗಾವತಿ ಸಮೀಪದ ರೇಲ್ವೆ ಕಾಮಗಾರಿ ಭರದಿಂದ ಸಾಗಿದೆ. ಆದರೆ, ರಾಯಚೂರು ಜಿಲ್ಲೆಯ ಮಾನವಿ ಮತ್ತು ಸಿಂಧನೂರು ಭಾಗದಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ. ಭೂ ಸ್ವಾಧೀನ ಮತ್ತು ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದ್ದು, ಇದರಿಂದ ಕಾಮಗಾರಿ ನಡೆಯುತ್ತಿಲ್ಲ ಎಂದು ದೂರಿದರು.
ಮಾನವಿ ಪ್ರದೇಶದಲ್ಲಿ ಇನ್ನೂ ಭೂ ಸ್ವಾಧೀನ ಕಾರ್ಯ ನಡೆದಿಲ್ಲ ಹಾಗೂ ಸಿಂಧನೂರು ಪ್ರದೇಶದಲ್ಲಿ ಪರಿಹಾರ ನೀಡಿಲ್ಲ. ಇದಕ್ಕೆ ಅನುದಾನದ ಕೊರತೆ ಇದೆ. ಈ ಹಿಂದೆ ಕೇಂದ್ರ ಸಚಿವರಾಗಿದ್ದ ಮುನಿಯಪ್ಪ ಅವರಿಗೆ ತ್ವರಿತಗತಿಯ ಕಾಮಗಾರಿಗೆ ಒತ್ತಾಯಿಸಿರುವುದಾಗಿ ಹೇಳಿದರು.
ಸಿಂಧನೂರು ತಾಲೂಕಿನ ಚನ್ನಳ್ಳಿ, ಕೊಂತನೂರು, ರವಡಕುಂದಾ, ಗೊರೇಬಾಳ, ಸಾಸಲಮರಿ, ಇ.ಜೆ. ಹೊಸಳ್ಳಿ ಮತ್ತು ಸಿಂಧನೂರು ಗ್ರಾಮಗಳ ಪ್ರಕರಣವು ಐತೀರ್ಪು ಹಂತದಲ್ಲಿದ್ದು, ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಮಾನ್ವಿ ತಾಲೂಕಿನ ಭೂಸ್ವಾಧೀನಕ್ಕೆ ರೇಲ್ವೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆಯಾದ ನಂತರ ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳುವಂತೆ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ ಎಂದು ಹೇಳಿದರು.
ಗದ್ವಾಲ್- ರಾಯಚೂರು ಮಾರ್ಗ ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಮುನಿರಾಬಾದ್‌ನಿಂದ ಗಂಗಾವತಿವರೆಗಿನ ಸಿವಿಲ್ ಕಾಮಗಾರಿಗೆ ರು. 100 ಕೋಟಿ ಅವಶ್ಯವಿದ್ದು, ಈ ಭಾಗದ ಕೇಂದ್ರ ಸಚಿವರಾಗಿರುವ ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಕಾಮಗಾರಿ ವೀಕ್ಷಿಸಿ ಅನುದಾನ ನೀಡಬೇಕು ಎಂದು ಸಂಸದ ಶಿವರಾಮಗೌಡ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮಸ್ವಾಮಿ, ರೇಲ್ವೆ ಹೋರಾಟ ಸಮಿತಿ ಸಂಚಾಲಕ ಪಂಪಾಪತಿ ಗುಪ್ತ ಇದ್ದರು.