ಜನರ ತಾಳ್ಮೆ ಪರೀಕ್ಷೆ?
ವಿಶೇಷ ವರದಿ
ಕನ್ನಡಪ್ರಭ ವಾರ್ತೆ , ರಾಯಚೂರು , ಆ.4
ಬಿಡಾಡಿ ದನಗಳ ಪ್ರಭಾವಕ್ಕೆ ಕೊನೆಗೂ ಜಿಲ್ಲಾಡಳಿತ ಮಣಿದಿದೆ. ಜಿಲ್ಲಾಡಳಿತವು ತಾನೇ ನೀಡಿದ್ದ ಎರಡನೇ ಗಡುವು ಕಳೆದರೂ ಆಡಳಿತ ಅಸಹಾಯಕ ಎಂಬುದನ್ನು ಸ್ಪಷ್ಟಗೊಳಿಸಿದೆ. ಶಾಸಕರೂ ಬಿಡಾಡಿ ದನಗಳ ಹಾವಳಿ ಬಗ್ಗೆ ಮೌನವಹಿಸಿದ್ದಾರೆ. ಪರಿಣಾಮ ರಾಯಚೂರಿನ ರಸ್ತೆಗಳು ಎಂದರೆ ಬಿಡಾಡಿ ದನಗಳ ವಿಹಾರ ತಾಣ, ತಗ್ಗು ಗುಂಡಿಗಳ ಸಾಮ್ರಾಜ್ಯ ಎಂದು ಹೇಳುವಷ್ಟು ಸಮಸ್ಯೆ ತೀವ್ರಗೊಂಡಿದೆ.
ನಗರಸಭೆ ಮತ್ತು ಜಿಲ್ಲಾಡಳಿತಗಳ ಕಾರ್ಯವೈಖರಿಗೆ ನಗರ ಸಾಕ್ಷಿಯಾಗಿದೆ. ಹದಗೆಟ್ಟ ರಸ್ತೆಗಳು, ಪ್ರಮುಖ ರಸ್ತೆಗಳಲ್ಲಿ ವಿಹರಿಸುತ್ತಾ ವಾಹನ ಸವಾರರಿಗೆ ತೊಂದರೆ ನೀಡುವ ನೂರಾರು ದನಗಳು ನಗರವನ್ನು ಅಂದಗೆಡಿಸಿವೆ. ಜತೆಗೆ ರಸ್ತೆಗಿಳಿದರೆ ಸುರಕ್ಷಿತವಾಗಿ ಮನೆಗೆ ಮರಳುವ ಸಾಧ್ಯತೆಯೂ ಕ್ಷೀಣಿಸಿದೆ.
ಸಂಚಾರ ಅಪಾಯ: ನಗರದ ಬಹುತೇಕ ರಸ್ತೆಗಳಲ್ಲಿ ಡಾಂಬರು ಕಡಿಮೆ ತಗ್ಗು, ಗುಂಡಿಗಳೇ ಹೆಚ್ಚು. ನಗರದಲ್ಲಿ ಇತ್ತೀಚೆಗೆ ಕೋಟಿ ಕೋಟಿ ರು. ಸುರಿದು ನಿರ್ಮಿಸಿದ ಚತುಷ್ಪಥ ರಸ್ತೆ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳಲ್ಲಿ ತಗ್ಗುಗಳದ್ದೇ ಸಾಮ್ರಾಜ್ಯ. ಅಲ್ಪಮಳೆಗೂ ತಗ್ಗುಗಳಲ್ಲಿ ನಿಲ್ಲುವ ನೀರಿನಿಂದ ರಸ್ತೆ ಸಂಚಾರ ಮಾಡುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ.
ನಗರದ ಚಂದ್ರಮೌಳೇಶ್ವರ ವೃತ್ತದಿಂದ-ಗಂಜ್ ವೃತ್ತಕ್ಕೆ ಸಂಪರ್ಕ ರಸ್ತೆ, ನೇತಾಜಿ ನಗರ ಪೊಲೀಸ್ ಠಾಣೆಯಿಂದ ಹನುಮಾನ್ ಚಿತ್ರಮಂದಿರವರೆಗಿನ ರಸ್ತೆ, ಬಸ್ ನಿಲ್ದಾಣದ ಮುಂದಿನ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ತಗ್ಗುಗಳು ಹೆಚ್ಚಾಗಿದ್ದು ಸಂಚಾರ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಮೀರಿದ ಗಡುವು: ಈಚೆಗೆ ನಿರ್ಮಿಸಿದ ಚತುಷ್ಪಥ ರಸ್ತೆಯೂ ಮಳೆಯಿಂದಾಗಿ ತನ್ನ ಕಳಪೆ ಗುಣಮಟ್ಟ ಬಯಲು ಮಾಡಿದೆ. ಇನ್ನು ರಸ್ತೆಯಲ್ಲಿನ ತಗ್ಗುಗಳು ಒಂದೆಡೆ ವಾಹನಗಳ ಸವಾರರಿಗೆ ಸರ್ಕಸ್ ಪ್ರಯಾಣದ ಅನುಭವ ನೀಡುತ್ತಿದ್ದರೆ, ಮತ್ತೊಂದೆಡೆ ಬಿಡಾಡಿ ದನಗಳು ರಾಜಾರೋಷವಾಗಿ ನಗರದ ಎಲ್ಲ ರಸ್ತೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ತಿರುಗಾಡುತ್ತಿರುವುದು ಸಂಕಷ್ಟಕ್ಕೆ ದಾರಿಯಾಗಿದೆ.
ನಗರದ ಎಲ್ಲ ರಸ್ತೆಗಳಲ್ಲಿ ದನಗಳ ಹಾವಳಿ ತೀರಾ ಸಾಮಾನ್ಯವಾಗಿದೆ. ಹಗಲು-ರಾತ್ರಿಯೆನ್ನದೇ ರಸ್ತೆಯಲ್ಲಿ ಮಲಗುವ ದನಗಳು ರಸ್ತೆಗಿಳಿಯುವವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಅವರೇ ಸ್ವತಃ ಈ ಮಾತನ್ನು ಒಪ್ಪಿಕೊಂಡಿದ್ದಾರೆ.
ಬಿಡಾಡಿ ದನಗಳ ಹಾವಳಿ ತಡೆಗೆ ನಗರಸಭೆ ಮತ್ತು ಜಿಲ್ಲಾಡಳಿತ ಹಿಂದೊಮ್ಮೆ ಗಡುವು ನೀಡಿದ್ದವು. ಆದರೆ ಆಗ ನಗರಸಭೆ ಚುನಾವಣೆಗಳು ಎದುರಾಗಿದ್ದರಿಂದ ರಾಜಕೀಯ ನಾಯಕರು ದನಗಳ ನಿಯಂತ್ರಣಾ ಕಾರ್ಯಾಚರಣೆಯಿಂದ ಸೋಲಾದೀತು ಎಂಬ ಭೀತಿಗೆ ಸಿಲುಕಿದ್ದರಿಂದ ಕ್ರಮ ಜರುಗಲಿಲ್ಲ.
ನಾಗರಿಕರ ಪ್ರಶ್ನೆ: ನಗರಸಭೆಯು ಎರಡನೇ ಬಾರಿಗೆ ಜುಲೈ 25ರ ಗಡುವು ನೀಡಿತ್ತು. ಆ ವೇಳೆಗೆ ದನಗಳನ್ನು ಅವುಗಳ ಮಾಲೀಕರು ರಸ್ತೆಯಿಂದ ಕರೆದೊಯ್ಯದಿದ್ದಲ್ಲಿ ಅವುಗಳನ್ನು ಆಡಳಿತದಿಂದ ನಗರದಿಂದ ಹೊರಕ್ಕೆ ಸಾಗಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.
ಆದರೆ ಗಡುವು ಕಳೆದು ವಾರವಾದರೂ ಆಡಳಿತ ಮಾತ್ರ ಕಾರ್ಯಾಚರಣೆಗೆ ಮುಂದಾಗಿಲ್ಲ. ದನಗಳ ಮಾಲೀಕರ ರಾಜಕೀಯ ಶಕ್ತಿಗೆ ಜಿಲ್ಲಾಡಳಿತ ಮತ್ತು ನಗರಸಭೆ ಆಡಳಿತಗಳು ತಲೆಬಾಗಿರುವುದು ಇದರಿಂದ ಸ್ಪಷ್ಟವಾಗಿದೆ. ಒಂದೆಡೆ ನಗರದ ರಸ್ತೆಗಳಲ್ಲಿ ಆಳವಾದ ತಗ್ಗುಗಳು ಮತ್ತೊಂದೆಡೆ ಬಿಡಾಡಿ ದನಗಳ ಹಾವಳಿಯನ್ನು ಸಹಿಸಿಕೊಂಡು ಏಳುತ್ತಾ ಬೀಳುತ್ತಲೇ ಜನತೆ ರಸ್ತೆಯಲ್ಲಿ ಸಾಗುತ್ತಿದ್ದಾರೆ. ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುವುದು ಯಾವಾಗ ಎಂಬುದು ನಾಗರಿಕರ ಪ್ರಶ್ನೆ.