ವಿದ್ಯಾರ್ಥಿಗಳಿಗೆ ವಿದ್ಯಮಾನ ಜ್ಞಾನ ಅವಶ್ಯ
ಕನ್ನಡಪ್ರಭ ವಾರ್ತೆ, ಸಿಂಧನೂರು, ಆ.5
ವಿದ್ಯಾರ್ಥಿಗಳಿಗೆ ಇಂದಿನ ಆಧುನಿಕ ವಿದ್ಯಮಾನಗಳ ಜ್ಞಾನ ಅವಶ್ಯ ಎಂದು ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಸ್ಥಳೀಯ ಕಮ್ಮವಾರಿ ಭವನದಲ್ಲಿ ಆದಿತ್ಯ ಸ್ವತಂತ್ರ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಪ್ರಥಮ ಪಿಯು ಹಾಗೂ ಬಿಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಓದು ಕೇವಲ ಅಂಕಪಟ್ಟಿಗೆ ಸೀಮಿತವಾಗುತ್ತಿದೆ. ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹಾಳಾಗುತ್ತಿದೆ ಮತ್ತು ಸಂಸ್ಕಾರ ಮತ್ತು ಶಿಕ್ಷಣ ಅರ್ಧಮರ್ಧಗೊಂಡಿವೆ. ಇದರಿಂದ ತಪ್ಪಿನ ಮೇಲೆ ತಪ್ಪುಗಳು ಘಟಿಸುತ್ತಿವೆ. ಅದಕ್ಕಾಗಿ ಸ್ವಾವಲಂಬಿ ಬದುಕು ಕಂಡುಕೊಳ್ಳುವ ಶಿಕ್ಷಣ ಅವಶ್ಯಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕೆ. ಚಕ್ರವರ್ತಿ ಮಾತನಾಡಿ, ಇತ್ತೀಚೆಗೆ ಬರುತ್ತಿರುವ ವಿದ್ಯಾರ್ಥಿಗಳಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ಇದರಿಂದ ಮೌಲ್ಯಯುತ ಶಿಕ್ಷಣಕ್ಕೆ ಪೆಟ್ಟು ಬೀಳುತ್ತಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಒಡಮೂಡಿದಾಗ ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಸಾಧ್ಯ. ಪದವಿ ಅಂತಿಮ ವರ್ಷದಲ್ಲಿ 22 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜ್ಗೆ ಕೀರ್ತಿ ತಂದಿದ್ದಾರೆಂದರು.
ಸಂಖ್ಯಾಶಾಸ್ತ್ರ ಉಪನ್ಯಾಸಕ ಸತ್ಯಪ್ರಕಾಶ, ಆಂಗ್ಲಭಾಷಾ ಉಪನ್ಯಾಸಕಿ ಲಕ್ಷ್ಮೀ ವೈ. ಶಂಕ್ರಪ್ಪ, ಗಣಕಯಂತ್ರ ಉಪನ್ಯಾಸಕ ಇಜಾಜ್ ಅಹ್ಮದ್ ಮಾತನಾಡಿದರು.
ಸಂಸ್ಥೆ ಕಾರ್ಯದರ್ಶಿ ವೆಂಕಟರತ್ನಾವತಿ ಇದ್ದರು. ಸೌಮ್ಯ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಲಕ್ಷ್ಮೀಕಾಂತ ದೇಸಾಯಿ ಸ್ವಾಗತಿಸಿ, ನಿರೂಪಿಸಿದರು.
ಉಪನ್ಯಾಸಕ ಹನುಮೇಶ ತಿಡಿಗೋಳ ವಂದಿಸಿದರು. ಇದೇ ಸಂದರ್ಭದಲ್ಲಿ ಪಿಯು ಪ್ರಥಮ, ಬಿಕಾಂ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
--