ಕಂಚಗಾರಹಳ್ಳಿ, ನೀರಿನ ಸಮಸ್ಯೆ ನಿವಾರಣೆ ಆಗ್ರಹ
ಯಾದಗಿರಿ: ತಾಲೂಕಿನ ಅಲ್ಲಿಪುರ ಗ್ರಾಪಂ ವ್ಯಾಪ್ತಿಯ ಕಂಚಗಾರಹಳ್ಳಿಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದು, ಕೂಡಲೇ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆ ಹರಿಸಬೇಕೆಂದು ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ಕೊಳವೆಬಾವಿ ಇಲ್ಲ. ಇದರಿಂದ ಗ್ರಾಮದಲ್ಲಿರುವ ಸಾರ್ವನಿಕರಿಗೆ ನೀರಿನ ಸಮಸ್ಯೆ ಇದ್ದು, ಕಂಚಗಾರಹಳ್ಳಿ ಗ್ರಾಮದಿಂದ ಅಲ್ಲಿಪುರಕ್ಕೆ ಗ್ರಾಮಕ್ಕೆ ಸುಮಾರು 2 ಕಿಮೀ ನಡೆದುಕೊಂಡು ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಪಂಪ್ ಆಪರೇಟರ್ ಕೂಡ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಮಸ್ಯೆ ನಿವಾರಿಸುವಂತೆ ಪಿಡಿಒ ಅವರಿಗೆ ಅನೇಕ ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ತೋರಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು.
ಅನುದಾನ ದುರ್ಬಳಕೆ ಆರೋಪ: ಗ್ರಾಪಂ.ಗೆ ಸರ್ಕಾರದಿಂದ ಕುಡಿಯುವ ನೀರಿನ ಯೋಜನೆಗೆ ಬಂದಿರುವ 13ನೇ ಹಣಕಾಸು ಇನ್ನಿತರೆ ಯೋಜನೆಗಳ ಅನುದಾನವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಗ್ರಾಮದಲ್ಲಿ ಕುಡಿವ ನೀರಿನ ಯೋಜನೆ ಯಾವುದೇ ಕಾಮಗಾರಿ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಕೂಡಲೇ ಕಂಚಗಾರಹಳ್ಳಿ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕು. ನಿರ್ಲಕ್ಷ್ಯ ವಹಿಸುತ್ತಿರವ ಗ್ರಾಮ ಪಂಚಾಯಿತಿ ಪಿಡಿಒ ಮೇಲೆ ಸೂಕ್ರ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕ್ಷೀರಭಾಗ್ಯ ಚಾಲನೆ
ಯಾದಗಿರಿ: ತಾಲೂಕಿನ ಅಬ್ಬೆತುಮಕೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರ ಭಾಗ್ಯ ಯೋಜನೆಗೆ ಜಿಪಂ ಸದಸ್ಯ ಬಸವರಾಜ ಖಂಡ್ರೆ ವಿದ್ಯಾರ್ಥಿಗಳಿಗೆ ಹಾಲು ಕುಡಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು ಮತ್ತು ದಾಖಲಾತಿ ಹೆಚ್ಚಿಸಲು ಉತ್ತಮ ಯೋಜನೆ ಜಾರಿಗೊಳಿಸಿದೆ. ಇದರ ಸದುಪಯೋಗವನ್ನು ಪಡೆದುಕೊಂಡು ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಬೇಕು. ಶಿಕ್ಷಕರು ಗುಣಮಟ್ಟದ ಹಾಲನ್ನು ವಿತರಿಸಿ, ಸ್ಚಚ್ಛತೆ ಕಡೆ ಗಮನ ಹರಿಸಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಎಸ್‌ಡಿಎಂಸಿ ರಚನೆ
ಯಾದಗಿರಿ: ತಾಲೂಕಿನ ನೀಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಮಾಡಲಾಯಿತು. ಉತ್ತಪ್ಪ ಹೂಗಾರ್ (ಅಧ್ಯಕ್ಷ), ಕಾಶಮ್ಮ ಪಾಪನೋರ (ಉಪಾಧ್ಯಕ್ಷ), ಶರಣಮ್ಮ, ಚಂದ್ರಕಲಾ, ಮುಮ್ತಾಜ್ ಬೇಗಂ, ಹುಸೇನಪ್ಪ, ಪೋಲಪ್ಪ, ವೆಂಕಟೇಶ, ವೆಂಕಟರಡ್ಡಿ, ಉತ್ತಮ್ಮ ಸ್ವಾಮಿ, ಗಂಗಮ್ಮ, ಮಲ್ಲಪ್ಪ, ಗಂಗಮ್ಮ (ಸದಸ್ಯರಾಗಿ) ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಮಲ್ಲರಡ್ಡಪ್ಪಗೌಡ ಇತರರು ಇದ್ದರು.
ಶಿಷ್ಯ ವೇತನಕ್ಕಾಗಿ ಅರ್ಜಿ ಆಹ್ವಾನ
ರಾಯಚೂರು: ಲಿಂಗಸ್ಗೂರು ತಾಲೂಕಿನ ವಿವಿಧ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಕಳೆದ ಸಾಲಿನ ಮೆಟ್ರಿಕ್ ಪೂರ್ವ ಶಿಷ್ಯ ವೇತನವನ್ನು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಮಂಜೂರು ಮಾಡಲಾಗಿತ್ತು. ಕಳೆದ ಸಾಲಿನ 10ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆನ್‌ಲೈನ್ ನೋಂದಣಿ ಸಂಖ್ಯೆ ನೀಡಲಾಗಿತ್ತು. ಈ ವರ್ಷ ಕಾಲೇಜು ಶಿಕ್ಷಣಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ನೋಂದಣಿ ಸಂಖ್ಯೆ ಪಡೆದು ಶಿಷ್ಯವೇತನ ಅರ್ಜಿಯಲ್ಲಿ ನಮೂದಿಸತಕ್ಕದ್ದು. ಈವರೆಗೆ ನೋಂದಣಿ ಮಾಡಿಸದ ಕಾಲೇಜು ಶಿಕ್ಷಣಕ್ಕೆ ಪ್ರವೇಶ ಪಡೆದಂತಹವರು ಸೆ.1ರಿಂದ 30ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು. ಲಿಂಗಸ್ಗೂರು ತಾಲೂಕಿನ ಎಲ್ಲ ಪ್ರಾಂಶುಪಾಲರು ತಮ್ಮ ಕಾಲೇಜಿನಲ್ಲಿ ಅಭ್ಯಾಸನಿರತ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ಅರ್ಜಿಗಳೊಂದಿಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ಲಿಂಗಸ್ಗೂರು ಇಲ್ಲಿ ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ.
ಮರದಿಂದ ಬಿಳಿ ದ್ರವ ಸೋರಿಕೆ; ಪೂಜೆ!
ರಾಯಚೂರು: ನಗರದ ಅಮರಖೇಡ್ ಲೇಔಟ್‌ನಲ್ಲಿನ ಬೇವಿನ ಮರದಲ್ಲಿ ಮಂಗಳವಾರ ಬೆಳಗ್ಗೆ ಹಾಲಿನಂಥ ಬಿಳಿ ದ್ರವ ಸುರಿಯುತ್ತಿದ್ದುದನ್ನು ಕಂಡ ಜನತೆ ಪೂಜೆ ಸಲ್ಲಿಸಿದ ಘಟನೆ ನಡೆಯಿತು.
ಹಳೆಯ ಬೇವಿನ ಮರದಲ್ಲಿ ಬೆಳಗ್ಗೆ ಹಾಲಿನಂಥ ಬಿಳಿ ದ್ರಮ ಕಾಣಿಸಿಕೊಂಡಿದೆ. ಅದರಲ್ಲೂ ಅಮವಾಸ್ಯೆಯ ದಿನದಂದು ಇಂಥ ವಿಚಿತ್ರ ನಡೆದಿದ್ದರಿಂದ ಜನತೆ ಅಚ್ಚರಿಗೊಂಡು, ಬೇವಿನ ಮರಕ್ಕೆ ಪೂಜೆ ಸಲ್ಲಿಸಲು ತಂಡೋಪತಂಡವಾಗಿ ಆಗಮಿಸಿದ್ದು ಕಂಡುಬಂದಿತು. ನಗರಸಭೆ ಸದಸ್ಯ ಮಾರೆಪ್ಪ, ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಪ್ರೊ. ಸಿ.ಡಿ. ಪಾಟೀಲ್ ಮತ್ತಿತರರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.
ಸ್ವಾತಂತ್ರ್ಯೋತ್ಸವಕ್ಕೆ ಭರದ ಸಿದ್ಧತೆ
ಸಿಂಧನೂರು: 67ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಭರದ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪೊಲೀಸ್, ಹೋಂ ಗಾರ್ಡ್ಸ್, ಸ್ಕೌಟ್ಸ್ ಮತ್ತು ಗೈಡ್ಸ್, ಶಾಲಾ ಮಕ್ಕಳಿಂದ ಧ್ವಜವಂದನೆ ಹಮ್ಮಿಕೊಳ್ಳಲಾಗಿದೆ. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹಂಪನಗೌಡ ಬಾದರ್ಲಿ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ.ಪಂ.ಅಧ್ಯಕ್ಷೆ ಲಲಿತಮ್ಮ ಲಿಂಗರಾಜ, ಕೊಪ್ಪಳ ಸಂಸದ ಶಿವರಾಮೇಗೌಡ, ಶಾಸಕ ಪ್ರತಾಪಗೌಡ ಪಾಟೀಲ್, ಎಂಎಲ್‌ಸಿಗಳಾದ ಹಾಲಪ್ಪಾಚಾರ್, ಅಮರನಾಥ ಪಾಟೀಲ್, ಸ. ಆಯುಕ್ತ ಟಿ. ಯೋಗೀಶ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಆರ್. ನಾರಾಯಣಪ್ಪ, ವೆಂಕಟರಾವ್ ನಾಡಗೌಡ ತಾ.ಪಂ. ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಎಪಿಎಂಸಿ ಅಧ್ಯಕ್ಷ ಸಣ್ಣ ಕರಿಯಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಲಂಕೆಪ್ಪ ಸಿಂಗಾಪುರ ಪಾಲ್ಗೊಳ್ಳುವರು.
ಪ್ರಶಸ್ತಿ ಸಮಾರಂಭ ಮುಂದೂಡಿಕೆ
ರಾಯಚೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಆಂಧ್ರದ ಕೃಷ್ಣಾ ಗ್ರಾಮದ ಗಡಿನಾಡು ಕನ್ನಡ ಸಂಘದಿಂದ ಆ. 9ರಂದು ಆಯೋಜಿಸಿದ್ದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಲಾಗಿದೆ. ಆಂಧ್ರದ ಮಕ್ತಲ್ ತಾಲೂಕಿನ ಮಾಗನೂರು ಮಂಡಲದ ಕೃಷ್ಣಾ ಗ್ರಾಮದಲ್ಲಿನ ಜಿಲ್ಲಾ ಪರಿಷತ್ ಕನ್ನಡ ಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ಆ. 9ರಂದು ನಡೆಯಬೇಕಿದ್ದ ಆಂಧ್ರದ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೆಲ ಅನಿವಾರ್ಯ ಕಾರಣಕ್ಕೆ ಮುಂದೂಡಿದ್ದು, ಸಮಾರಂಭದ ಮುಂದಿನ ದಿನಾಂಕ ಶೀಘ್ರ ಅಂತಿಮಗೊಳಿಸಲಾಗುತ್ತದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಪ್ರಶಸ್ತಿಗೆ ಆಹ್ವಾನ
ರಾಯಚೂರು: ಕಳೆದ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ಮಾಜಿ ಸೈನಿಕರ ಮಕ್ಕಳಿಗೆ ಜನರಲ್ ತಿಮ್ಮಯ್ಯ ಪ್ರಶಸ್ತಿ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಕರೆಯಲಾಗಿದೆ. ಮಾಜಿ ಸೈನಿಕರ ಮಕ್ಕಳು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕ ಪಡೆದವರು ಅರ್ಜಿ ಸಲ್ಲಿಸಬಹುದು. ಪ್ರಶಸ್ತಿಯನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ನೀಡಲಾಗುತ್ತಿದ್ದು, ರಾಯಚೂರು, ಗುಲ್ಬರ್ಗ, ಬೀದರ್ ಮತ್ತು ಯಾದಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡಿರುವ ಮಾಜಿ ಸೈನಿಕರ ಮಕ್ಕಳು ನಿಗದಿತ ಅರ್ಜಿಯನ್ನು ಆ. 15ರೊಳಗೆ ಕಚೇರಿಯಿಂದ ಪಡೆದು ಸಲ್ಲಿಸಲು ಕೋರಲಾಗಿದೆ.
ನಾಳೆ ಗ್ರಾಪಂ ಸಭೆ
ಮಸ್ಕಿ: ಪಟ್ಟಣದ ಕೇಂದ್ರೀಯ ಶಾಲೆ ಶತಮಾನೋತ್ಸವ ಭವನದಲ್ಲಿ ಗ್ರಾಪಂನ ಸಾಮಾನ್ಯ ಸಭೆ ಆ.8 ರಂದು ಕರೆಯಲಾಗಿದೆ. ಅಂದು ಬೆಳಗ್ಗೆ 11ಕ್ಕೆ ಸಭೆ ಕರೆಯಲಾಗಿದ್ದು ಸಭೆಯಲ್ಲಿ ಪ್ರಸಕ್ತ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದ, ಗ್ರಾಮ ಸ್ವರಾಜ್ ಯೋಜನೆ, 13ನೇ ಹಣಕಾಸು ಯೋಜನೆಯ ಕುರಿತು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯ ಮಟ್ಟಕ್ಕೆ ಆಯ್ಕೆ
ಮಸ್ಕಿ: ರಾಯಚೂರಿನ ಯರಮರಸ್ ಡಯಟ್ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಪ್ರಸಕ್ತ ಸಾಲಿನ ಇನ್‌ಸ್ಪೈರ್ ವಿಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ಇಲ್ಲಿನ ಮೊರಾರ್ಜಿ ವಸತಿ ಶಾಲೆ(ಎಸ್ಸಿ) 8ನೇ ತರಗತಿ ವಿದ್ಯಾರ್ಥಿನಿ ಚಂದ್ರಕಲಾ ಉತ್ತಮ ಸಾಧನೆ ಮಾಡಿದ್ದಾಳೆ. ಸ್ವಯಂ ಚಾಲಿತ ಬೀದಿ ದ್ವೀಪದ ಮಾದರಿ ಪ್ರದರ್ಶಿಸಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆಂದು ಶಾಲೆಯ ಪ್ರಾಚಾರ್ಯ ಕಲ್ಪನಾ ಹಾಗೂ ಶಿಕ್ಷಕರು ತಿಳಿಸಿದ್ದಾರೆ.
ಪ್ರವೇಶಕ್ಕೆ ಆಹ್ವಾನ
ರಾಯಚೂರು: ಲಿಂಗಸ್ಗೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪಿಪಿಪಿ ಯೋಜನೆಯಡಿ ವಿವಿಧ ಕೋರ್ಸುಗಳಿಗೆ ಪ್ರವೇಶಕ್ಕೆ ಅರ್ಜಿ ಕರೆಯಲಾಗಿದೆ. ಎಲೆಕ್ಟ್ರಿಶಿಯನ್, ಎಲೆಕ್ಟ್ರಾನಿಕ್ಸ್ ಕೋರ್ಸುಗಳಿಗಾಗಿ 10 ಸೀಟು ಲಭ್ಯವಿದ್ದು, 14ರಿಂದ 40 ವರ್ಷದೊಳಗಿನ ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ವಿವರಕ್ಕೆ ಐಟಿಐ ಸಂಸ್ಥೆಯನ್ನು ಸಂಪರ್ಕಿಸಬಹುದು.