ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತುಂಗಭದ್ರಾ, ಕೃಷ್ಣಾ ನದಿಯಲ್ಲಿ ಮತ್ತೆ ಪ್ರವಾಹ

Vishwanath S
Updated On : 7 Aug 2013, 11:08 am

ರಾಯಚೂರು: ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ತಗ್ಗಿದ್ದ ಕೃಷ್ಣಾ ಮತ್ತು ತುಂಗಭದ್ರಾ ನದಿ ನೀರಿನ ಪ್ರವಾಹ ಮತ್ತೆ ಹೆಚ್ಚಿದ್ದು, ನದಿ ತೀರದಲ್ಲಿ ಮತ್ತೆ ಆತಂಕದ ದಿನಗಳು ಎದುರಾಗಿವೆ. ತುಂಗಭದ್ರಾ ನದಿಯಲ್ಲಿ ಹೆಚ್ಚಿರುವ ಪ್ರವಾಹವು ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯದ ನಿವಾಸಿಗಳಲ್ಲಿ ಆತಂಕ ತಂದಿದೆ.
ನಾರಾಯಣಪುರ ಮತ್ತು ತುಂಗಭದ್ರಾ ಜಲಾಶಯಗಳಿಂದ ಲಕ್ಷಾಂತರ ಕ್ಯುಸೆಕ್ ನೀರು ಹೊರ ಹರಿಸುತ್ತಿರುವುದು ಪ್ರವಾಹ ಭೀತಿ ಮತ್ತೆ ಮೂಡಿಸಿದೆ. ಕೃಷ್ಣಾ ಮತ್ತು ತುಂಗಭದ್ರಾ ನದಿ ತೀರದ ಹೊಲ ಗದ್ದೆಗಳಿಗೆ ಪ್ರವಾಹದ ನೀರು ನುಗ್ಗುವ ಮೂಲಕ ಸಮಸ್ಯೆ ಮತ್ತೆ ಹೆಚ್ಚಳ ಕಂಡಿದೆ.
ಪ್ರವಾಹ ಭೀತಿ: ನಾರಾಯಣಪುರ ಜಲಾಶಯದಿಂದ ಸೋಮವಾರದಂದು 2.20 ಲಕ್ಷ ಕ್ಯುಸೆಕ್ ನೀರು ಹೊರಹರಿಸಿದರೆ, ಮಂಗಳವಾರದಂದು 1.46 ಲಕ್ಷ ಕ್ಯುಸೆಕ್ ನೀರು ಹೊರಹರಿಸಲಾಗಿದೆ. ಇದರಿಂದ ಲಿಂಗಸ್ಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಲಿಂಗಸ್ಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಅದರಿಂದಾಗಿ ಕಡದರಗಡ್ಡೆ, ಯಳಗುಂದಿ ಮತ್ತಿತರೆ ನಡುಗಡ್ಡೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಅದೇ ರೀತಿ ದೇವದುರ್ಗ-ಶಹಪುರಕ್ಕೆ ಸಂಪರ್ಕ ಕಲ್ಪಿಸುವ ಹೂವಿನ ಹೆಡಗಿ ಸೇತುವೆ ಬಳಿ ಕೃಷ್ಣಾ ನದಿಯು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.
ಭಕ್ತರಲ್ಲಿ ಆತಂಕ: ದೇವದುರ್ಗ ತಾಲೂಕಿನ ನದಿ ತೀರದ ಗ್ರಾಮ ಕೊಪ್ಪರದಲ್ಲಿ ಮಂಗಳವಾರ ಮಧ್ಯಾಹ್ನ ಕೃಷ್ಣಾ ನದಿ ನೀರು ಶ್ರೀಲಕ್ಷ್ಮಿನರಸಿಂಹ ದೇವಸ್ಥಾನವನ್ನು ಸುತ್ತುವರಿಯಲಾರಂಭಿಸಿದ್ದು, ಮತ್ತೆ ಭಕ್ತರಲ್ಲಿ ಆತಂಕ ತಂದಿದೆ. ಇನ್ನು ರಾಯಚೂರು ತಾಲೂಕಿನಲ್ಲೂ ಪ್ರವಾಹ ಭೀತಿ ಮತ್ತೆ ಆರಂಭವಾಗಿದೆ. ನದಿ ತೀರದ ಗ್ರಾಮಗಳ ರೈತರ ಬತ್ತದ ಗದ್ದೆಗಳಿಗೆ ನೀರು ನುಗ್ಗಿದ್ದು ರೈತರು ಬೆಳೆ ಹಾನಿ ಭೀತಿಗೆ ಸಿಲುಕಿದ್ದಾರೆ.
ಇತ್ತ ತುಂಗಭದ್ರಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳ ಕಂಡಿದ್ದು, ಅದರಿಂದ ಸಿಂಧನೂರು, ಮಾನವಿ ಹಾಗೂ ರಾಯಚೂರು ತಾಲೂಕಿನ ನದಿ ತೀರದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ರಾಯಚೂರು ತಾಲೂಕಿನ ತುಂಗಭದ್ರಾ ಗ್ರಾಮದ ನದಿ ತೀರದಲ್ಲಿ ರೈತರ ಗದ್ದೆಗಳಿಗೆ ನೀರು ನುಗ್ಗಿದ್ದು, ರೈತರು ಆತಂಕಕ್ಕೆ ಸಿಲುಕಿದ್ದಾರೆ.
ತುಂಗಭದ್ರಾ ನದಿಗೆ 1,65,509 ಕ್ಯುಸೆಕ್ ನೀರು ಜಲಾಶಯದಿಂದ ಹೊರಹರಿಸುತ್ತಿದ್ದು, ಆಂಧ್ರದ ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯದ ಬಳಿ ತುಂಗಭದ್ರಾ ನದಿಯು ಉಕ್ಕಿ ಹರಿಯುತ್ತಿದೆ. ಗ್ರಾಮ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಜತೆಗೆ ಮಂತ್ರಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆಯೂ ತಗ್ಗಿದೆ. ಮಂತ್ರಾಲಯದಲ್ಲಿ ಪ್ರವಾಹ ಭೀತಿಯಿದ್ದು, ನದಿ ನೀರು ಶ್ರೀಮಠ ನಿರ್ಮಿಸಿರುವ ಕಾಂಕ್ರೀಟ್ ಹಾಸಿನವರೆಗೆ ಬಂದು ಸೇರಿದೆ. ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಭಕ್ತರಿಗೆ ಆಂಧ್ರ ಪೊಲೀಸರು ಮುನ್ನೆಚ್ಚರಿಕೆ ನೀಡುವ ಕಾರ್ಯ ಮಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement