ಸಿಂಧನೂರು; ಇಂದಿನಿಂದ ಪುರಾಣ ಪ್ರವಚನ
ಕನ್ನಡಪ್ರಭ ವಾರ್ತೆ , ಸಿಂಧನೂರು , ಆ.6
ಸಿಂಧನೂರಿನ ವಳಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಆ.7ರಿಂದ ಸೆ.6ರವರೆಗೆ ಶಿವಶರಣೆ ಸಜ್ಜಲಗುಡ್ಡ ಶರಣಮ್ಮನವರ 19ನೇ ವರ್ಷದ ಪುರಾಣ ಪ್ರವಚನ ಕಾರ್ಯಕ್ರಮ ನಿತ್ಯ ಸಂಜೆ 6ರಿಂದ 9 ರವರೆಗೆ ನಡೆಯಲಿದೆ.
ಅಧ್ಯಕ್ಷತೆಯನ್ನು ಕಲ್ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ನೇತೃತ್ವವನ್ನು ರವುಡಕುಂದಾ ಸಂಸ್ಥಾನ ಹಿರೇಮಠದ ಮರಿಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ರಂಭಾಪುರಿ ಶಾಖಾಮಠದ ಸೋಮನಾಥ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಗವಿಸಿದ್ದೇಶ್ವರ ವಿರಕ್ತಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ದೊಡ್ಡಬಸವಾರ್ಯದಿಂದ ಉದ್ಘಾಟನೆ: ಕಂಬಳಿಹಾಳ ಸಜ್ಜಲಗುಡ್ಡದ ದೊಡ್ಡಬಸವಾರ್ಯ ಶರಣರು ಉದ್ಘಾಟನೆ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ವೆಂಕಟಗಿರಿಕ್ಯಾಂಪ್ ಸಿದ್ದಾಶ್ರಮದ ಸಿದ್ದರಾಮೇಶ್ವರ ಶರಣರು ಪಾಲ್ಗೊಳ್ಳುವರು. ಪ್ರವಚನಕಾರರಾಗಿ ಹನುಮಸಾಗರದ ಸಕ್ರಪ್ಪ ಶಾಸ್ತ್ರಿಗಳು, ಸಂಗೀತಗಾರರಾಗಿ ಗುಂಡೂರುರಿನ ಜೆಎಚ್ಎಸ್ ಗವಾಯಿಗಳು, ತಬಲಾ ವಾದಕರಾಗಿ ಶಂಕ್ರಪ್ಪ ಮಾಸ್ತರ ಹೇರೂರು ಪಾಲ್ಗೊಳ್ಳುವರು.
ಸೆ. 6ರಂದು ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಎಪಿಎಂಸಿ ಮಾಜಿ ಉಪಾಧ್ಯಕ್ಷ ರಾಜಶೇಖರಗೌಡ, ನಯೋಪ್ರಾ ಮಾಜಿ ಅಧ್ಯಕ್ಷ ಶಿವನಗೌಡ ಗೊರೇಬಾಳ, ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ ಪಾಲ್ಗೊಳ್ಳುವರು. ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ದೇವಸ್ಥಾನ ಸಮಿತಿಯವರು ವಿನಂತಿಸಿದ್ದಾರೆ.
ಕಾರ್ಯಕ್ರಮಗಳ ವಿವರ: ಸೆ. 6ರಂದು ಬೆಳಗ್ಗೆ 5.30ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಚಂದ್ರಯ್ಯ ಸ್ವಾಮಿ ತಾರಾನಗರ ಇವರ ಖಡ್ಗ ಪ್ರವಚನ, ಸುಮಂಗಲಿಯರ ಕಳಸ ಕನ್ನಡಿಯೊಂದಿಗೆ ಗಂಗಾಸ್ಥಳಕ್ಕೆ ಹೋಗಿ 11ಕ್ಕೆ ಅಗ್ನಿಕುಂಡ ಪ್ರವೇಶ ಮಾಡುವುದು. ನಂತರ 12ಕ್ಕೆ ಭೂರಿ ಗಣಾರಾಧನೆ ಮತ್ತು ಮಹಾಪ್ರಸಾದ ವಿತರಣೆ ಸಾಯಂಕಾಲ 5 ಗಂಟೆಗೆ ಉಚ್ಛಾಯ ಮಹೋತ್ಸವ, 7 ಗಂಟೆಗೆ ಆಗಮಿಸಿದ ಹರಗುರು ಚರಮೂರ್ತಿಗಳ ಆಶೀರ್ವಚನದೊಂದಿಗೆ ಪುರಾಣ ಮಂಗಲಗೊಳ್ಳುವುದು ಎಂದು ವಳಕೋಟೆ ವೀರಭದ್ರೇಶ್ವರ ಸೇವಾ ಸಮಿತಿ ತಿಳಿಸಿದೆ.