ನೀರಾವರಿ ಅಕ್ರಮ ಕಂಡು ದಂಗಾದರು!
ಕನ್ನಡಪ್ರಭ ವಾರ್ತೆ , ಕಾರಟಗಿ , ಆ.7
ತುಂಗಭದ್ರಾ ಎಡದಂಡೆ ನಾಲೆಯಲ್ಲಿ ನಿತ್ಯ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಪ್ರತಿಷ್ಠಿತರೇ ರಾಜಾರೋಷವಾಗಿ ಹಗಲಿರುಳೆನ್ನದೆ ನೀರು ಕದಿಯುತ್ತಿರುವುದು ಮಂಗಳವಾರ ಸಂಜೆ ರಾಯಚೂರು ಜಿಲ್ಲಾಧಿಕಾರಿ ಮತ್ತು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ಗಮನಕ್ಕೆ ಬಂತು.
ನೀರು ಬಳಕೆ ನಿಯಮ ಉಲ್ಲಂಘನೆ, ಅನಧಿಕೃತ ಸಾಗುವಳಿ, ನೀರು ಕಳವಿನಂಥ ಅಕ್ರಮಗಳನ್ನು ಖುದ್ದಾಗಿ ಕಂಡರು. ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಪರಿಹಾರ ಒದಗಿಸಿ ಹಿಂದಿರುಗುತ್ತಿದ್ದ ವೇಳೆ ಸಿಂಧನೂರು ತಾಲೂಕಿನ ಕೊನೆ ಭಾಗದ ರೈತರು ಅಕ್ರಮ ನೀರಾವರಿ, ನೀರುಗಳ್ಳತನದ ಒಂದೊಂದು ಮಾದರಿಗಳನ್ನು ಪ್ರತ್ಯಕ್ಷವಾಗಿ ತೋರಿಸಿದರು.
ದೇವಿಕ್ಯಾಂಪ್ ಬಳಿ ಕಾಲುವೆ ಎರಡು ಬದಿ ಜಾಕ್ವೆಲ್ಗಳನ್ನು ನಿರ್ಮಿಸಿದ್ದು ಅವೈಜ್ಞಾನಿಕತೆ ಎನ್ನುವುದು ಜಿಲ್ಲಾಧಿಕಾರಿ ತಮ್ಮ ವಾಹನ ಇಳಿಯುತ್ತಿದ್ದಂತೆ ಇರುವುದು ನೋಡಿ ಅಚ್ಚರಿ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ದಂಗು: ಮೇಲ್ನೋಟಕ್ಕೆ ಜಾಕ್ವೆಲ್ ಇಳಿಸಿದ್ದರೂ ನೀರು ನಿರಾತಂಕವಾಗಿ ಹೊಲಗಳ ಮೂಲಕ ಬೃಹತ್ ಕೆರೆಗೆ ಸೇರುವುದನ್ನು ನೋಡಿ ಶಾಸಕ ಬಾದರ್ಲಿ ಖೇದ ವ್ಯಕ್ತಪಡಿಸಿದರು. ದೇವಿಕ್ಯಾಂಪ್ ಸುತ್ತಲಿನ ಪ್ರದೇಶ ಸೇರಿದಂತೆ 31ನೇ ವಿತರಣಾ ನಾಲೆ ಕಚೇರಿಯಿಂದ ಪ್ರಾರಂಭಗೊಂಡು ಕೊನೆ ಭಾಗದವರೆಗೂ ಅಕ್ರಮ ನೀರಾವರಿ ರಾಜಭಾರ ಇರುವುದು ಸ್ಪಷ್ಟವಾಯಿತು.
ದೇವಿಕ್ಯಾಂಪ್ ಮುಂದೆ ಹಾಗೂ ಹಿಂದೆ 31ರ ಕಾಲುವೆಯಿಂದ ಕಳವು ಮಾಡಿದ ನೀರಿನಿಂದ ನೂರಾರು ಎಕರೆಯಲ್ಲಿ ಬತ್ತ ಬೆಳೆಯಲಾಗುತ್ತಿದೆ. ಇದಕ್ಕೆ ನೀರಾವರಿ ಅಧಿಕಾರಿಗಳು ಏನು ಮಾಡ್ತಾ ಇದ್ದಾರೆ ಎಂದು ಒಂದು ಹಂತದಲ್ಲಿ ನೆರೆದಿದ್ದ ರೈತರು ಪ್ರಶ್ನಿಸಿದರು. ಕಾಲುವೆ ಎಡ ಮತ್ತು ಬಲ ಬದಿಯಲ್ಲಿ ವ್ಯವಸಾಯಕ್ಕೆ ನೀರಾವರಿ ಸೌಲಭ್ಯವಿಲ್ಲ. ಆದರೂ ಕಾಲುವೆ ಪಕ್ಕದಲ್ಲಿ ಕೆಲವರು ಜಮೀನಿನಲ್ಲಿ ಬಾವಿ ತೋಡಿಸಿ ಪಂಪ್ಸೆಟ್ಗಳನ್ನು ಅಳವಡಿಸಿಕೊಂಡಿದ್ದೂ ಗಮನಕ್ಕೆ ಬಂತು.
ಅಕ್ರಮದ್ದೇ ಕಾರುಬಾರು: ಸಂಜೆಯಾಗುತ್ತಿದ್ದಂತೆ ಕಾಲುವೆಗೆ ಪಂಪ್ಸೆಟ್ ಪೈಪ್ ಹಾಕಿ ನೀರು ಕಳವು ಮಾಡುವುದನ್ನು ಖುದ್ದಾಗಿ ರೈತರು ಡಿಸಿ ಮತ್ತು ಶಾಸಕ ಗಮನಕ್ಕೆ ತಂದರು. ಕಾಲುವೆ ದಂಡೆಯಲ್ಲಿ ಟ್ರ್ಯಾಕ್ಟರ್ ನಿಂತಿದ್ದನ್ನು ತೋರಿಸಿದ ರೈತರು, ಆ ಟ್ರ್ಯಾಕ್ಟರ್ನಿಂದ ಬೃಹತ್ ಪೈಪ್ ಹಾಕುವುದನ್ನು ತೋರಿಸಿದರು. ಇದನ್ನು ನೋಡಿದ ಡಿಸಿ ದಂಗಾದರು.
ಅಕ್ರಮಕ್ಕೆ 'ಬತ್ತ'ದ ಬೆಂಬಲ: ದೇವಿಕ್ಯಾಂಪ್ ಸುತ್ತಮುತ್ತ ಅಕ್ರಮ ಕೆರೆಗಳು, ಹಾಡು ಹಗಲೇ ನೀರುಗಳ್ಳತನ ನಡೆಯುತ್ತಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಮೌನವಾಗಿರುವುದಕ್ಕೆ ಕಾರಣವಿದೆ. ಅಕ್ರಮ ನೀರು ಕಳ್ಳತನ ಮಾಡುವವರು, ಅಕ್ರಮ ಕೆರೆ ನಿರ್ಮಿಸಿಕೊಂಡ ರೈತರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಎಕರೆಗೆ 3 ಚೀಲ ಬತ್ತ ನೀಡುತ್ತಾರೆ ಎಂದು ರೈತರು ಆರೋಪಿಸಿದರು.
ಒಟ್ಟಾರೆಯಾಗಿ ನೀರಾವರಿ ಇಲಾಖೆ ಬೇಜವಾಬ್ದಾರಿ ಮತ್ತು ನೀರು ಬಳಕೆ ನಿಯಮ ಉಲ್ಲಂಘನೆಯಿಂದ ಕೊನೆ-ಕೆಳ ಭಾಗದ ರೈತರ ಸಂಘರ್ಷಕ್ಕೆ ಕಾರಣವಾಗಿದೆ.
ಕಾಂಕ್ರೀಟ್ ಧ್ವಂಸ
ರಾಯಚೂರು: ಸಿಂಧನೂರು ತಾಲೂಕಿನ ಗೌಡನಭಾವಿ-ತಿಪ್ಪನಹಟ್ಟಿ ಗ್ರಾಮದ ಮಧ್ಯೆ ತುಂಗಭದ್ರಾ ಎಡದಂಡೆಯ 54ನೇ ವಿತರಣೆ ಕಾಲುವೆ ಉಪಕಾಲುವೆ 2ಎಲ್ನಲ್ಲಿ ಸಿಂಮೆಟ್ ಕಾಂಕ್ರೀಟ್ 40 ಜನ ರೈತರು ಕಿತ್ತು ಹಾಕಿ ಹಾನಿಗೊಳಿಸಿದ ಬಗ್ಗೆ ದೂರು ದಾಖಲಾಗಿದೆ.
ವಿತರಣೆ ಕಾಲುವೆಯ 54ರ ಉಪವಿತರಣೆ ಕಾಲುವೆ 2ಎಲ್ನಲ್ಲಿ ಸಿಮೆಂಟ್ ಕಾಂಕ್ರೀಟ್ ಲೈನಿಂಗ್ನ್ನು ಸುಮಾರು 40 ಜನ ರೈತರು ಯಂತ್ರ ಬಳಸಿ ಧ್ವಂಸಗೊಳಿಸಿದ್ದು, ಅದರಿಂದ 38-40 ಲಕ್ಷ ಹಾನಿಯಾಗಿದೆ ಎಂದು ಮಸ್ಕಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್. ಕುಮಾರಸ್ವಾಮಿ ಪೊಲೀಸರಿಗೆ ದೂರಿತ್ತಿದ್ದಾರೆ. ಈ ಬಗ್ಗೆ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
16 ಕ್ಯುಸೆಕ್ ನೀರು ಹರಿಸಲು ಜಿಲ್ಲಾಧಿಕಾರಿ ಸೂಚನೆ
ಸಿಂಧನೂರು: ತಾಲೂಕಿನ ಗಣೇಶ ಕ್ಯಾಂಪಿನ ಹತ್ತಿರ ಇರುವ 31/6 ಸಮಸ್ಯೆ ಭುಗಿಲೆದ್ದಿದ್ದು, ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೆಳಭಾಗದ ರೈತರಿಗೆ ತಲುಪಬೇಕಾದ 16 ಕ್ಯುಸೆಕ್ ನೀರಿನ ಸಮರ್ಪಕ ಸರಬರಾಜಿಗೆ ನೀರಾವರಿ ಅಧಿಕಾರಿಗಳು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ ಸೂಚಿಸಿದರು.
ಪ್ರವಾಸಿ ಮಂದಿರದಲ್ಲಿ ಮಂಗಳವಾರ ರಾತ್ರಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಚನ್ನಳ್ಳಿ, ಸಿದ್ರಾಂಪುರ, ಗಣೇಶ ಕ್ಯಾಂಪಿನ ರೈತರಿಗೆ ಸಮರ್ಪಕ ನೀರು ತಲುಪದೆ ಇರುವುದರಿಂದ ಆಕ್ರೋಶಗೊಂಡು ತಮ್ಮ ಭಾಗಕ್ಕೆ ಬರುವ ಪೈಪನ್ನು ಜೆಸಿಬಿಯಿಂದ ಕಿತ್ತಿದ ಪರಿಣಾಮ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಮೂರು ವರ್ಷಗಳಿಂದ ರೈತರ ಸಮಸ್ಯೆಗೆ ಪರಿಹಾರವಿಲ್ಲದಂತಾಗಿದೆ. ಡಿಸೈನ್ ಪ್ರಕಾರ ಕಾಲುವೆ ಕಾಮಗಾರಿ ನಡೆದಾಗ ಮಾತ್ರ ಸಮಸ್ಯೆ ಇತ್ಯರ್ಥವಾಗಲಿದೆ. ಕಾಮಗಾರಿ ಮಾಡಬೇಕೆಂದರೆ ಡಿಸೆಂಬರ್ವರೆಗೂ ಕಾಯಬೇಕಾಗುತ್ತದೆ. ಹೀಗಾಗಿ ತಾತ್ಕಾಲಿಕ ಕ್ರಮಕ್ಕೆ ಮುಂದಾಗಬೇಕಿದೆ. ಕೆಳಭಾಗದ ರೈತರಿಗೆ ಅಗತ್ಯ ನೀರು ಪೂರೈಕೆ ಮಾಡಿ ಸಮಸ್ಯೆ ಉದ್ಭವವಾಗದಂತೆ ಎಚ್ಚರಿಕೆ ವಹಿಸಬೇಕು. ಚೈನ್ ನಂ.420, 441ರಲ್ಲಿ ಭೇಟಿ ನೀಡಿ ಅಕ್ರಮ ಪೈಪುಗಳನ್ನು ತೆರವುಗೊಳಿಸಬೇಕೆಂದು ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಿ.ಇ. ಮಲ್ಲಿಕಾರ್ಜುನ ಅವರಿಗೆ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಹಂಪನಗೌಡ ಬಾದರ್ಲಿ, ಮುಖಂಡರಾದ ರಾಜಶೇಖರ ಪಾಟೀಲ್, ಕೆ.ಕರಿಯಪ್ಪ, ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಮತ್ತಿತರರ ನೀರಾವರಿ ಇಲಾಖೆಯ ಅಧಿಕಾರಿಗಳು ಇದ್ದರು.